ಆನ್‌ಲೈನ್‌ನಲ್ಲಿ ನಿಮ್ಮನ್ನು ಹೆಚ್ಚು ಸುರಕ್ಷಿತವಾಗಿರಿಸಲು ಸಹಾಯ ಮಾಡುವ ಸಲಹೆಗಳು

ನೀವು ಪ್ರಬಲ ಪಾಸ್‌ವರ್ಡ್‌ಗಳನ್ನು ರಚಿಸಲು, ನಿಮ್ಮ ಸಾಧನಗಳನ್ನು ರಕ್ಷಿಸಿಕೊಳ್ಳಲು, ಫಿಶಿಂಗ್ ಪ್ರಯತ್ನಗಳಿಂದ ತಪ್ಪಿಸಿಕೊಳ್ಳಲು ಮತ್ತು ಇಂಟರ್ನೆಟ್ ಅನ್ನು ಸುರಕ್ಷಿತವಾಗಿ ಬ್ರೌಸ್ ಮಾಡಲು ನಾವು ಕೆಲವು ತ್ವರಿತ ಸಲಹೆಗಳನ್ನು ಹಾಗೂ ಅತ್ಯುತ್ತಮ ಅಭ್ಯಾಸಗಳನ್ನು ನಿಮಗಾಗಿ ಒಟ್ಟಾಗಿ ಸೇರಿಸಿದ್ದೇವೆ.

ನಿಮ್ಮ ಖಾತೆಯ ಭದ್ರತೆಯನ್ನು ಬಲಪಡಿಸಿ

 • ಭದ್ರತಾ ಪರಿಶೀಲನೆಗೆ ಒಳಪಡಿ

  ನಿಮ್ಮ Google ಖಾತೆಯನ್ನು ರಕ್ಷಿಸಲು ಸುಲಭ ಮಾರ್ಗವೆಂದರೆ ಭದ್ರತಾ ಪರಿಶೀಲನೆಗೆ ಒಳಪಡುವುದು. ನಿಮ್ಮ Google ಖಾತೆಯ ಸುರಕ್ಷತೆಯನ್ನು ಬಲಪಡಿಸುವಂತೆ ಸಹಾಯ ಮಾಡಲು, ನಿಮಗೆ ವೈಯಕ್ತೀಕರಿಸಿದ ಮತ್ತು ಕ್ರಮಬದ್ಧವಾದ ಭದ್ರತಾ ಶಿಫಾರಸುಗಳನ್ನು ನೀಡಲು, ನಾವು ಹಂತ ಹಂತವಾಗಿ ಸಲಹೆ ನೀಡುವ ಈ ಪರಿಕರವನ್ನು ರಚಿಸಿದ್ದೇವೆ.

 • ಸದೃಢವಾದ ಪಾಸ್‌ವರ್ಡ್‌‌ಗಳನ್ನು ರಚಿಸಿ

  ನಿಮ್ಮ ಆನ್‌ಲೈನ್‌ ಖಾತೆಗಳನ್ನು ರಕ್ಷಿಸಲು ನೀವು ತೆಗೆದುಕೊಳ್ಳಬಹುದಾದ ಅತ್ಯಂತ ಮಹತ್ವದ ಹೆಜ್ಜೆಗಳಲ್ಲಿ, ಸದೃಢವಾದ ಮತ್ತು ಅನನ್ಯವಾದ ಪಾಸ್‌ವರ್ಡ್‌ ರಚಿಸುವುದೂ ಒಂದಾಗಿದೆ. ನಿಮಗೆ ಮರೆಯಲಾಗದಂತಹ, ಆದರೆ ಇತರರಿಗೆ ಊಹಿಸಲು ಕಷ್ಟವಾಗುವಂತಹ ಪದಗಳ ಸರಣಿಯನ್ನು ಬಳಸಿಕೊಂಡು ನೀವು ಇದನ್ನು ಮಾಡಬಹುದು. ಅಥವಾ ಉದ್ದನೆಯ ವಾಕ್ಯವೊಂದನ್ನು ತೆಗೆದುಕೊಂಡು, ಅದರ ಪ್ರತಿ ಪದದ ಮೊದಲ ಅಕ್ಷರಗಳನ್ನು ಜೋಡಿಸಿ ಪಾಸ್‌ವರ್ಡ್‌ ರಚಿಸಬಹುದು. ಅದನ್ನು ಇನ್ನೂ ಸದೃಢಪಡಿಸಲು, ಅದು ಕನಿಷ್ಠ 8 ಅಕ್ಷರಗಳಷ್ಟು ಉದ್ದವಿರುವಂತೆ ಮಾಡಿ. ಏಕೆಂದರೆ ನಿಮ್ಮ ಪಾಸ್‌ವರ್ಡ್‌ ಉದ್ದವಾಗಿದ್ದಷ್ಟೂ ಸದೃಢವಾಗಿರುತ್ತದೆ.

  ಭದ್ರತಾ ಪ್ರಶ್ನೆಗಳಿಗೆ ಉತ್ತರಗಳನ್ನು ರಚಿಸಲು ಕೇಳಿದರೆ, ನಕಲಿ ಉತ್ತರಗಳ ಬಳಕೆಯನ್ನು ಪರಿಗಣಿಸಿ, ಇದರಿಂದ ಅವುಗಳನ್ನು ಊಹಿಸಲು ಇನ್ನೂ ಕಷ್ಟಕರವಾಗುತ್ತದೆ.

 • ಪ್ರತಿಯೊಂದು ಖಾತೆಗೂ ಅನನ್ಯ ಪಾಸ್‌ವರ್ಡ್‌ಗಳನ್ನು ಬಳಸಿ

  ನಿಮ್ಮ Google ಖಾತೆ, ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳು ಮತ್ತು ವ್ಯಾಪಾರಿ ವೆಬ್‌ಸೈಟ್‌ಗಳಂತಹ ಬಹು ಖಾತೆಗಳಲ್ಲಿ ಲಾಗ್ ಇನ್ ಮಾಡಲು ಒಂದೇ ಪಾಸ್‌ವರ್ಡ್ ಬಳಸುವುದರಿಂದ ನಿಮ್ಮ ಭದ್ರತಾ ಅಪಾಯವು ಹೆಚ್ಚುತ್ತದೆ. ಇದು ನಿಮ್ಮ ಮನೆ, ಕಾರು, ಮತ್ತು ಕಚೇರಿಗಳನ್ನು ಲಾಕ್ ಮಾಡಲು ಒಂದೇ ಕೀಲಿಯನ್ನು ಬಳಸಿದಂತೆ - ಯಾರಾದರೂ ಅವುಗಳಲ್ಲಿ ಒಂದಕ್ಕೆ ಪ್ರವೇಶ ಪಡೆದರೆ, ಎಲ್ಲವಕ್ಕೂ ಧಕ್ಕೆಯುಂಟಾಗುತ್ತದೆ. ಪ್ರತಿ ಖಾತೆಗೂ ಒಂದು ಅನನ್ಯವಾದ ಪಾಸ್‌ವರ್ಡ್ ರಚಿಸುವುದರಿಂದ, ಈ ಅಪಾಯವು ನಿವಾರಣೆಯಾಗುತ್ತದೆ ಮತ್ತು ನಿಮ್ಮ ಖಾತೆಗಳು ಹೆಚ್ಚು ಸುರಕ್ಷಿತವಾಗಿರುತ್ತವೆ.

 • ಬಹು ಪಾಸ್‌ವರ್ಡ್‌ಗಳನ್ನು ಟ್ರ್ಯಾಕ್‌‌ ಮಾಡಿ

  ನಿಮ್ಮ Google ಖಾತೆಯಲ್ಲಿರುವಂತೆಯೇ ಪಾಸ್‌ವರ್ಡ್‌ ನಿರ್ವಾಹಕವು, ನಿಮ್ಮ ಸೈಟ್‌ಗಳು ಮತ್ತು ಆ್ಯಪ್‌ಗಳಲ್ಲಿ ನೀವು ಬಳಸುವ ಪಾಸ್‌ವರ್ಡ್‌ಗಳನ್ನು ರಕ್ಷಿಸಲು ಮತ್ತು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. Google ನ ಪಾಸ್‌ವರ್ಡ್ ನಿರ್ವಾಹಕವು, ನೀವು ಸುರಕ್ಷಿತವಾಗಿ ಮತ್ತು ಸುಲಭವಾಗಿ ಸೈನ್‌ ಇನ್ ಮಾಡಲು ನೀವು ಉಳಿಸಿದ ಪಾಸ್‌ವರ್ಡ್‌ಗಳನ್ನು ಬಳಸಿಕೊಳ್ಳುತ್ತದೆ.

 • 2-ಹಂತದ ಪರಿಶೀಲನೆಯ ಮೂಲಕ ಹ್ಯಾಕರ್‌ಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ

  2-ಹಂತದ ಪರಿಶೀಲನೆ ಇದು ನಿಮ್ಮ ಖಾತೆಗೆ ಲಾಗ್ ಇನ್ ಮಾಡಲು ನಿಮ್ಮ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್‌ಗಳನ್ನು ನಮೂದಿಸಿದ ನಂತರವೂ ಎರಡನೆಯ ಅಂಶವೊಂದನ್ನು ನೀವು ಬಳಸುವ ಅಗತ್ಯತೆಯ ಮೂಲಕ, ನಿಮ್ಮ ಖಾತೆಗೆ ಪ್ರವೇಶವನ್ನು ಹೊಂದಬಾರದಂತಹ ಯಾರನ್ನಾದರೂ ಹೊರಗಿಡುವಂತೆ ಸಹಾಯ ಮಾಡುತ್ತದೆ. ಉದಾಹರಣೆಗೆ, Google ನೊಂದಿಗೆ ಇದು Google ಅಥೆಂಟಿಕೇಟರ್ ಆ್ಯಪ್‌‌ನಿಂದ ರಚಿಸಲ್ಪಟ್ಟ ಆರು ಅಂಕಿಯ ಒಂದು ಕೋಡ್ ಆಗಿರಬಹುದು, ಅಥವಾ ವಿಶ್ವಾಸಾರ್ಹ ಸಾಧನವೊಂದರಿಂದ ಲಾಗಿನ್ ಸ್ವೀಕರಿಸಲು Google ಆ್ಯಪ್‌‌ನಲ್ಲಿ ಬರುವ ಒಂದು ಪ್ರಾಂಪ್ಟ್ ಆಗಿರಬಹುದು.

  ಫಿಶಿಂಗ್ ವಿರುದ್ಧ ಮತ್ತಷ್ಟು ರಕ್ಷಣೆಗಾಗಿ, ನಿಮ್ಮ ಕಂಪ್ಯೂಟರ್‌ನ USB ಪೋರ್ಟ್‌ಗೆ ಅಳವಡಿಸುವ ಅಥವಾ ಸಮೀಪ ಕ್ಷೇತ್ರ ಸಂವಹನ ಅಥವಾ ಬ್ಲೂಟೂತ್ ಬಳಸಿಕೊಂಡು ನಿಮ್ಮ ಮೊಬೈಲ್ ಸಾಧನಕ್ಕೆ ಸಂಪರ್ಕಿಸುವ ಭೌತಿಕ ಭದ್ರತಾ ಕೀಲಿಯೊಂದನ್ನು ನೀವು ಖರೀದಿಸಬಹುದು. ಕಾರ್ಯಕರ್ತರು, ಪತ್ರಕರ್ತರು ಅಥವಾ ರಾಜಕೀಯ ಅಭಿಯಾನದ ತಂಡಗಳು ಸೇರಿದಂತೆ - ತಮ್ಮ ಮೇಲೆ ಹೆಚ್ಚು ಉದ್ದೇಶಿತ ದಾಳಿಯ ಅಪಾಯವಿದೆ ಎಂದು ಭಾವಿಸುವ ಯಾರಿಗಾದರೂ ಭೌತಿಕ ಭದ್ರತಾ ಕೀಲಿಯ ಬಳಕೆಯೇ 2-ಹಂತದ ಪರಿಶೀಲನೆಯ ಏಕೈಕ ಸ್ವರೂಪವೆಂದು ಜಾರಿಗೊಳಿಸುವ ಮೂಲಕ ಫಿಶಿಂಗ್ ವಿರುದ್ಧ Google ನ ಪ್ರಬಲವಾದ ಸಂರಕ್ಷಣೆಯನ್ನು ಸುಧಾರಿತ ಸಂರಕ್ಷಣೆ ಪ್ರೋಗ್ರಾಂ ಒದಗಿಸುತ್ತದೆ.

ನಿಮ್ಮ ಸಾಧನಗಳನ್ನು ರಕ್ಷಿಸಿ

 • ಸಾಫ್ಟ್‌ವೇರ್ ಅಪ್ ಟು ಡೇಟ್ ಆಗಿ ಇರಿಸಿಕೊಳ್ಳಿ

  ಸುರಕ್ಷತಾ ದೌರ್ಬಲ್ಯಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ನಿಮ್ಮ ವೆಬ್‌ ಬ್ರೌಸರ್, ಆಪರೇಟಿಂಗ್ ಸಿಸ್ಟಂ, ಪ್ಲಗ್ ಇನ್‌‌ಗಳು ಮತ್ತು ಡಾಕ್ಯುಮೆಂಟ್ ಎಡಿಟರ್‌ಗಳಾದ್ಯಂತ ಯಾವಾಗಲೂ ಅಪ್-ಟು-ಡೇಟ್ ಸಾಫ್ಟ್‌ವೇರ್ ಬಳಸಿ. ನಿಮ್ಮ ಸಾಫ್ಟ್‌ವೇರ್ ಅಪ್‌ಡೇಟ್‌ ಮಾಡಲು ಅಧಿಸೂಚನೆಗಳನ್ನು ಸ್ವೀಕರಿಸಿದಾಗ, ಸಾಧ್ಯವಾದಷ್ಟು ಬೇಗ ಅದನ್ನು ಅಪ್‌ಡೇಟ್‌ ಮಾಡಿ.

  ನೀವು ಯಾವಾಗಲೂ ಲಭ್ಯವಿರುವ ಇತ್ತೀಚಿನ ಆವೃತ್ತಿಗಳನ್ನು ಬಳಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ನೀವು ಸಾಮಾನ್ಯವಾಗಿ ಬಳಸುವ ಸಾಫ್ಟ್‌ವೇರ್ ಪರಿಶೀಲಿಸಿ. Chrome ಬ್ರೌಸರ್ ಸೇರಿದಂತೆ ಕೆಲವು ಸೇವೆಗಳು, ಸ್ವಯಂಚಾಲಿತವಾಗಿ ತಮ್ಮಷ್ಟಕ್ಕೆ ತಾವೇ ಅಪ್‌ಡೇಟ್‌ ಆಗುತ್ತವೆ.

 • ಸಂಭಾವ್ಯ ಅಪಾಯಕಾರಿ ಆ್ಯಪ್‌ಗಳನ್ನು ನಿಮ್ಮ ಫೋನ್‌ನಿಂದ ದೂರವಿರಿಸಿ

  ಯಾವಾಗಲೂ ನಿಮಗೆ ವಿಶ್ವಾಸವಿರುವ ಮೂಲದಿಂದ ನಿಮ್ಮ ಮೊಬೈಲ್‌ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ. Android ಸಾಧನಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡಲು, Google Play ಸ್ಟೋರ್‌ನಿಂದ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡುವ ಮೊದಲು, Google Play ರಕ್ಷಣೆ ಅವುಗಳ ಮೇಲೆ ಸುರಕ್ಷತಾ ಪರಿಶೀಲನೆಯೊಂದನ್ನು ನಡೆಸುತ್ತದೆ ಮತ್ತು ಇತರ ಮೂಲಗಳಿಂದ ಬರುವ ಸಂಭಾವ್ಯ ಅಪಾಯಕಾರಿ ಆ್ಯಪ್‌ಗಳಿಗಾಗಿ ನಿಮ್ಮ ಸಾಧನವನ್ನು ನಿಯತಕಾಲಿಕವಾಗಿ ಪರಿಶೀಲಿಸುತ್ತದೆ.

  ನಿಮ್ಮ ಡೇಟಾವನ್ನು ಸಂರಕ್ಷಿಸಲು:

  • ನಿಮ್ಮ ಆ್ಯಪ್‌ಗಳನ್ನು ಪರಿಶೀಲಿಸಿ ಮತ್ತು ನೀವು ಬಳಸದಿರುವ ಆ್ಯಪ್‌ಗಳನ್ನು ಅಳಿಸಿ.
  • ನಿಮ್ಮ ಆ್ಯಪ್‌ ಸ್ಟೋರ್‌ ಸೆಟ್ಟಿಂಗ್‌ಗಳಿಗೆ ಭೇಟಿ ನೀಡಿ ಮತ್ತು ಸ್ವಯಂ-ಅಪ್‌ಡೇಟ್‌ಗಳನ್ನು ಸಕ್ರಿಯಗೊಳಿಸಿ.
  • ನಿಮಗೆ ವಿಶ್ವಾಸವಿರುವ ಆ್ಯಪ್‌ಗಳಿಗೆ ಮಾತ್ರ ನಿಮ್ಮ ಸ್ಥಳ ಮತ್ತು ಫೋಟೋಗಳಂತಹ ಸೂಕ್ಷ್ಮ ಡೇಟಾಗಳಿಗೆ ಪ್ರವೇಶವನ್ನು ನೀಡಿ.
 • ಸ್ಕ್ರೀನ್‌ ಲಾಕ್‌ ಬಳಸಿ

  ನೀವು ನಿಮ್ಮ ಕಂಪ್ಯೂಟರ್‌, ಲ್ಯಾಪ್‌ಟಾಪ್, ಟ್ಯಾಬ್ಲೆಟ್‌‌ ಅಥವಾ ಫೋನ್‌ ಅನ್ನು ಬಳಸದೇ ಇರುವಾಗ, ಇತರರು ನಿಮ್ಮ ಸಾಧನವನ್ನು ಪ್ರವೇಶಿಸದಂತೆ ನಿಮ್ಮ ಸ್ಕ್ರೀನ್‌ ಅನ್ನು ಲಾಕ್ ಮಾಡಿ. ಹೆಚ್ಚುವರಿ ಸುರಕ್ಷತೆಗಾಗಿ, ನಿಮ್ಮ ಸಾಧನವು ನಿದ್ರಾವಸ್ಥೆಗೆ ಹೋದಾಗ, ಅದು ಸ್ವಯಂಚಾಲಿತವಾಗಿ ಲಾಕ್‌ ಆಗುವಂತೆ ಹೊಂದಿಸಿ.

 • ನಿಮ್ಮ ಫೋನ್ ಕಳೆದುಕೊಂಡರೆ, ಅದನ್ನು ಲಾಕ್ ಮಾಡಿ

  ನಿಮ್ಮ ಫೋನ್ ಎಂದಾದರೂ ಕಳೆದುಹೋದರೆ ಅಥವಾ ಕಳ್ಳತನವಾದರೆ, ಕೆಲವು ತ್ವರಿತ ಹಂತಗಳ ಮೂಲಕ ನಿಮ್ಮ ಡೇಟಾವನ್ನು ರಕ್ಷಿಸಲು ನೀವು [ನಿಮ್ಮ Google ಖಾತೆ] (https://myaccount.google.com/?hl=en) ಗೆ ಭೇಟಿ ನೀಡಬಹುದು ಹಾಗೂ "ನಿಮ್ಮ ಫೋನ್ ಹುಡುಕಿ" ಆಯ್ಕೆ ಮಾಡಬಹುದು. ನಿಮ್ಮದು Android ಸಾಧನವಿರಲಿ ಅಥವಾ iOS ಸಾಧನವೇ ಇರಲಿ, ಬೇರೆ ಯಾರೊಬ್ಬರೂ ನಿಮ್ಮ ಫೋನ್‌ ಅನ್ನು ಬಳಸಿಕೊಂಡು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸಲು ಸಾಧ್ಯವಾಗದಂತೆ ನಿಮ್ಮ ಫೋನ್ ಅನ್ನು ನೀವು ದೂರದಿಂದಲೇ ಗುರುತಿಸಿ, ಲಾಕ್‌ ಮಾಡಬಹುದು.

ಫಿಶಿಂಗ್ ಪ್ರಯತ್ನಗಳನ್ನು ತಪ್ಪಿಸಿ

 • ಅನುಮಾನಾಸ್ಪದ URL ಗಳು ಮತ್ತು ಲಿಂಕ್‌ಗಳನ್ನು ಯಾವಾಗಲೂ ಮೌಲ್ಯೀಕರಿಸಿ

  ಪಾಸ್‌ವರ್ಡ್‌ನಂತಹ ಕ್ಲಿಷ್ಟಕರ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕಾಗಿ ನಿಮ್ಮನ್ನು ಮೋಸಗೊಳಿಸಲು ಫಿಶಿಂಗ್‌ ಪ್ರಯತ್ನಿಸುತ್ತಿದೆ. ಇದು ಹಲವು ಪ್ರಕಾರಗಳನ್ನು ತೆಗೆದುಕೊಳ್ಳಬಹುದು, ಆದ್ದರಿಂದ ಅನುಮಾನಾಸ್ಪದ ಇಮೇಲ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಹೇಗೆ ಕಂಡುಹಿಡಿಯುವುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಉದಾಹರಣೆಗೆ, ಒಬ್ಬ ಹ್ಯಾಕರ್ ಕಾನೂನುಬದ್ಧವಾಗಿರುವಂತೆ ಕಾಣುವ, ಆದರೆ ವಾಸ್ತವದಲ್ಲಿ ನಕಲಿಯಾಗಿರುವ ಲಾಗಿನ್ ಪುಟವೊಂದನ್ನು ರಚಿಸಬಹುದು. ಮತ್ತು ಒಮ್ಮೆ ನಿಮ್ಮ ಪಾಸ್‌ವರ್ಡ್ ಬಹಿರಂಗಗೊಂಡಾಗ ಆ ಹ್ಯಾಕರ್ ನಿಮ್ಮ ಖಾತೆಯನ್ನು ಪ್ರವೇಶಿಸಬಹುದು ಅಥವಾ ನಿಮ್ಮ ಯಂತ್ರಕ್ಕೆ ಸೋಂಕು ತಗುಲಿಸಬಹುದು.

  ಫಿಶಿಂಗ್‌ನಿಂದ ತಪ್ಪಿಸಿಕೊಳ್ಳಲು:

  • ಪ್ರಶ್ನಾರ್ಹ ಲಿಂಕ್‌ಗಳ ಮೇಲೆ ಎಂದಿಗೂ ಕ್ಲಿಕ್ ಮಾಡಬೇಡಿ.
  • ನೀವು ನಿಮ್ಮ ಡೇಟಾವನ್ನು ಕಾನೂನುಬದ್ಧ ವೆಬ್‌ಸೈಟ್‌ ಅಥವಾ ಆ್ಯಪ್‌‌ನಲ್ಲಿಯೇ ನಮೂದಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಯಾವಾಗಲೂ URL ಅನ್ನು ಎರಡು ಬಾರಿ ಪರಿಶೀಲಿಸಿ.
  • ಯಾವುದೇ ಮಾಹಿತಿಯನ್ನು ಸಲ್ಲಿಸುವ ಮೊದಲು, ಸೈಟ್‌ನ URL "https" ನೊಂದಿಗೆ ಪ್ರಾರಂಭವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
 • ಸೋಗು ಹಾಕುವವರ ಬಗೆಗೆ ಜಾಗರೂಕರಾಗಿರಿ

  ನಿಮಗೆ ತಿಳಿದಿರುವ ಯಾರಾದರೂ ನಿಮಗೆ ಇಮೇಲ್‌ಗಳನ್ನು ಕಳುಹಿಸಿದ್ದು, ಅವರ ಸಂದೇಶವು ಅಸಂಬದ್ಧವೆಂದು ಭಾಸವಾದರೆ, ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿರಬಹುದು. ಇಮೇಲ್‌ ಕಾನೂನುಬದ್ಧವಾಗಿದೆ ಎಂದು ನಿಮಗೆ ದೃಢೀಕರಿಸಲಾಗುವವರೆಗೂ ಯಾವುದೇ ಸಂದೇಶಗಳಿಗೆ ಪ್ರತ್ಯುತ್ತರ ನೀಡಬೇಡಿ ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.

  ಈ ಕೆಳಗಿನ ವಿಷಯಗಳ ಕುರಿತು ಗಮನವಿರಲಿ:

  • ಹಣಕ್ಕಾಗಿ ತುರ್ತು ವಿನಂತಿಗಳು
  • ವ್ಯಕ್ತಿಯೊಬ್ಬರು ತಾನು ಇನ್ನೊಂದು ದೇಶದಲ್ಲಿ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದೇನೆಂದು ಹೇಳಿಕೊಳ್ಳುವುದು
  • ವ್ಯಕ್ತಿಯೊಬ್ಬರು ತಮ್ಮ ಫೋನ್‌ ಕಳುವಾಗಿರುವುದರಿಂದ ಕರೆ ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಿಲ್ಲವೆನ್ನುವುದು
 • ವೈಯಕ್ತಿಕ ಮಾಹಿತಿ ಕೋರುವ ವಿನಂತಿಗಳ ಕುರಿತು ಜಾಗರೂಕರಾಗಿರಿ

  ಪಾಸ್‌ವರ್ಡ್‌, ಬ್ಯಾಂಕ್‌ ಖಾತೆ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಅಥವಾ ನಿಮ್ಮ ಹುಟ್ಟುಹಬ್ಬದಂತಹ ವೈಯಕ್ತಿಕ ಮಾಹಿತಿಯನ್ನು ಕೇಳುವ ಅನುಮಾನಾಸ್ಪದ ಇಮೇಲ್‌ಗಳು, ತ್ವರಿತ ಸಂದೇಶಗಳು ಅಥವಾ ಪಾಪ್-ಅಪ್ ವಿಂಡೋಗಳಿಗೆ ಪ್ರತ್ಯುತ್ತರ ನೀಡಬೇಡಿ. ನಿಮ್ಮ ಬ್ಯಾಂಕ್‌ನಂತಹ ನೀವು ನಂಬುವ ಸೈಟ್‌ ಮೂಲಕ ಸಂದೇಶವು ಬಂದಿದ್ದರೂ ಸಹ, ಎಂದಿಗೂ ಲಿಂಕ್‌ ಅನ್ನು ಕ್ಲಿಕ್‌ ಮಾಡಬೇಡಿ ಅಥವಾ ಸಂದೇಶವೊಂದಕ್ಕೆ ಪ್ರತ್ಯುತ್ತರವನ್ನು ಕಳುಹಿಸಬೇಡಿ. ನಿಮ್ಮ ಖಾತೆಗೆ ಲಾಗಿನ್‌ ಮಾಡಲು ಅವರ ವೆಬ್‌ಸೈಟ್‌ ಅಥವಾ ಆ್ಯಪ್‌ಗೆ ನೇರವಾಗಿ ಹೋಗುವುದು ಉತ್ತಮವಾಗಿದೆ.

  ನೀವು ಇಮೇಲ್‌ ಮೂಲಕ ಪಾಸ್‌ವರ್ಡ್‌ಗಳು ಅಥವಾ ಹಣಕಾಸು ಮಾಹಿತಿಯನ್ನು ಕಳುಹಿಸಿ ಎಂಬ ಸಂದೇಶಗಳ ಮನವಿಯನ್ನು ಕಾನೂನುಬದ್ಧ ಸೈಟ್‌ಗಳು ಮತ್ತು ಸೇವೆಗಳು ಎಂದಿಗೂ ಕಳುಹಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

 • ಇಮೇಲ್‌ ಸ್ಕ್ಯಾಮ್‌ಗಳು, ನಕಲಿ ಬಹುಮಾನಗಳು ಮತ್ತು ಉಡುಗೊರೆಗಳ ಬಗ್ಗೆ ಎಚ್ಚರವಿರಲಿ

  ಅಪರಿಚಿತರಿಂದ ಬಂದ ಸಂದೇಶಗಳು ಯಾವಾಗಲೂ ಅನುಮಾನಾಸ್ಪದವಾಗಿರುತ್ತವೆ, ವಿಶೇಷವಾಗಿ ಅವುಗಳನ್ನು ನಿಜವೆಂದು ನಂಬಲು ಕಷ್ಟವಾಗುವಷ್ಟು ಒಳ್ಳೆಯದಿದ್ದಾಗ. ಉದಾಹರಣೆಗೆ, ನೀವು ಏನಾದರೂ ಗೆದ್ದಿರುವಿರಿ, ಸಮೀಕ್ಷೆಯನ್ನು ಪೂರ್ಣಗೊಳಿಸುವುದಕ್ಕಾಗಿ ಬಹುಮಾನಗಳನ್ನು ನೀಡುತ್ತಿದ್ದಾರೆ ಅಥವಾ ಹಣವನ್ನು ಗಳಿಸುವ ತ್ವರಿತ ಮಾರ್ಗಗಳನ್ನು ಪ್ರಚಾರ ಮಾಡುವಂತಹ ಸಂದೇಶಗಳು. ಅನುಮಾನಾಸ್ಪದ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್‌ ಮಾಡಬೇಡಿ ಮತ್ತು ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಪ್ರಶ್ನಾರ್ಹ ಫಾರ್ಮ್‌ಗಳು ಮತ್ತು ಸಮೀಕ್ಷೆಗಳಲ್ಲಿ ನಮೂದಿಸಬೇಡಿ.

 • ಫೈಲ್‌ಗಳನ್ನು ಡೌನ್‌ಲೋಡ್‌ ಮಾಡುವ ಮೊದಲು ಎರಡುಬಾರಿ ಪರಿಶೀಲಿಸಿ

  ಸೋಂಕು ತಗುಲಿದ ಡಾಕ್ಯುಮೆಂಟ್‌ಗಳು ಹಾಗೂ PDF ಲಗತ್ತುಗಳ ಮೂಲಕ ಕೆಲವು ಅತ್ಯಾಧುನಿಕ ಫಿಶಿಂಗ್ ದಾಳಿಗಳು ಸಂಭವಿಸಬಹುದು. ನಿಮಗೆ ಅನುಮಾನಾಸ್ಪದ ಲಗತ್ತೊಂದು ಕಂಡುಬಂದಲ್ಲಿ, ಅದನ್ನು ತೆರೆಯಲು Chrome ಅಥವಾ Google ಡ್ರೈವ್ ಬಳಸಿ ಮತ್ತು ನಿಮ್ಮ ಸಾಧನಕ್ಕೆ ಸೋಂಕು ತಗುಲಿಸುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಿ. ನಾವು ವೈರಸ್ ಒಂದನ್ನು ಪತ್ತೆ ಹಚ್ಚಿದರೆ, ನಿಮಗೆ ಮುನ್ನೆಚ್ಚರಿಕೆಯನ್ನು ತೋರಿಸುತ್ತೇವೆ.

ಸುರಕ್ಷಿತ ನೆಟ್‌ವರ್ಕ್‌ಗಳು ಮತ್ತು ಸಂಪರ್ಕಗಳಲ್ಲಿ ಬ್ರೌಸಿಂಗ್

 • ಸುರಕ್ಷಿತ ನೆಟ್‌ವರ್ಕ್‌ಗಳನ್ನು ಬಳಸಿ

  ಸಾರ್ವಜನಿಕ ಅಥವಾ ಉಚಿತ ವೈ-ಫೈ ಬಳಸುವ ಬಗ್ಗೆ, ಹಾಗೆಯೇ ಪಾಸ್‌ವರ್ಡ್ ಅಗತ್ಯವಿರುವ ವೈಫೈಗಳ ಕುರಿತು ಸಹ ಜಾಗರೂಕರಾಗಿರಿ. ಈ ನೆಟ್‌ವರ್ಕ್‌ಗಳನ್ನು ಎನ್‌ಕ್ರಿಪ್ಟ್‌ ಮಾಡದಿರಬಹುದು, ಆದ್ದರಿಂದ ನೀವು ಸಾರ್ವಜನಿಕ ನೆಟ್‌ವರ್ಕ್‌ ಒಂದಕ್ಕೆ ಸಂಪರ್ಕಿಸಿದಾಗ, ಸಮೀಪದಲ್ಲಿರುವ ಯಾರಿಗಾದರೂ ನೀವು ಭೇಟಿ ನೀಡುವ ವೆಬ್‌ಸೈಟ್‌ಗಳು ಹಾಗೂ ನೀವು ಸೈಟ್‌ಗಳಲ್ಲಿ ಟೈಪ್ ಮಾಡುವ ಮಾಹಿತಿಗಳಂತಹ ನಿಮ್ಮ ಇಂಟರ್ನೆಟ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗಬಹುದು. ಸಾರ್ವಜನಿಕ ಅಥವಾ ಉಚಿತ ವೈ-ಫೈ ನಿಮ್ಮ ಏಕೈಕ ಆಯ್ಕೆಯಾಗಿದ್ದಲ್ಲಿ, ಸೈಟ್ ಒಂದಕ್ಕೆ ನಿಮ್ಮ ಸಂಪರ್ಕ ಸುರಕ್ಷಿತವಾಗಿದೆಯೇ ಎಂಬುದನ್ನು Chrome ಬ್ರೌಸರ್ ವಿಳಾಸ ಪಟ್ಟಿಯಲ್ಲಿ ತಿಳಿಸುತ್ತದೆ. ಮನೆಯಲ್ಲಿಯೂ ಸಹ, ನಿಮ್ಮ ವೈ-ಫೈ ನೆಟ್‌ವರ್ಕ್ ಅನ್ನು ಎನ್‌ಕ್ರಿಪ್ಟ್‌ ಮಾಡಲಾಗಿದೆಯೇ ಮತ್ತು ಸದೃಢ ಪಾಸ್‌ವರ್ಡ್ ಒಂದನ್ನು ಹೊಂದಿಸಲಾಗಿದೆಯೇ ಎಂದು ಖಚಿತ ಪಡಿಸಿಕೊಳ್ಳುವ ಮೂಲಕ, ನಿಮ್ಮ ಬ್ರೌಸಿಂಗ್ ಚಟುವಟಿಕೆಯ ಗೌಪ್ಯತೆ ಮತ್ತು ಭದ್ರತೆಯನ್ನು ಸಂರಕ್ಷಿಸಿಕೊಳ್ಳಿ.

 • ಸೂಕ್ಷ್ಮ ಮಾಹಿತಿಯನ್ನು ನಮೂದಿಸುವ ಮೊದಲು ಸುರಕ್ಷಿತ ಸಂಪರ್ಕಗಳಿಗಾಗಿ ಅವಲೋಕಿಸಿ

  ನೀವು ವೆಬ್ ಬ್ರೌಸ್ ಮಾಡುತ್ತಿರುವಾಗ – ಮತ್ತು ವಿಶೇಷವಾಗಿ ಪಾಸ್‌ವರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಸಂಖ್ಯೆಗಳಂತಹ ಸೂಕ್ಷ್ಮ ಮಾಹಿತಿಯನ್ನು ನಮೂದಿಸುವುದಿದ್ದರೆ – ನೀವು ಭೇಟಿ ನೀಡುವ ಸೈಟ್‌ಗಳ ಸಂಪರ್ಕವು ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸುರಕ್ಷಿತ URL ಆಗಿದ್ದರೆ, Chrome ಬ್ರೌಸರ್‌ URL ಕ್ಷೇತ್ರದಲ್ಲಿ ಬೂದು ಬಣ್ಣದ, ಸಂಪೂರ್ಣವಾಗಿ ಲಾಕ್ ಮಾಡಲಾದ ಐಕಾನ್ ಅನ್ನು ತೋರಿಸುತ್ತದೆ. ನೀವು ಭೇಟಿ ನೀಡುವ ವೆಬ್‌ಸೈಟ್‌ಗಳ ಜೊತೆಗೆ ನಿಮ್ಮ ಬ್ರೌಸರ್ ಅಥವಾ ಆ್ಯಪ್ ಅನ್ನು ಸುರಕ್ಷಿತವಾಗಿ ಸಂಪರ್ಕಿಸುವ ಮೂಲಕ ನಿಮ್ಮ ಬ್ರೌಸಿಂಗ್‌ ಅನ್ನು ಸುರಕ್ಷಿತವಾಗಿರಿಸಲು HTTPS ಸಹಾಯ ಮಾಡುತ್ತದೆ.

ನಮ್ಮ ಸುರಕ್ಷತೆ ಪ್ರಯತ್ನಗಳ ಬಗ್ಗೆ ಇನ್ನಷ್ಟು ತಿಳಿಯಿರಿ

ನಿಮ್ಮ ಭದ್ರತೆ

ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಭದ್ರತೆಯ ಮೂಲಕ ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ರಕ್ಷಿಸುತ್ತೇವೆ.

ನಿಮ್ಮ ಗೌಪ್ಯತೆ

ಎಲ್ಲರಿಗೂ ಹೊಂದುವ ಗೌಪ್ಯತೆಯನ್ನು ನಾವು ಒದಗಿಸುತ್ತೇವೆ.

ಕುಟುಂಬಗಳಿಗಾಗಿ

ನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸೂಕ್ತವಾಗಿದೆ ಎಂಬುದನ್ನು ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.