ಇಂಟರ್ನೆಟ್‌ನಾದ್ಯಂತ ಭದ್ರತೆಯನ್ನು ಬಲಪಡಿಸಲು ಸಹಭಾಗಿತ್ವ

ಜಗತ್ತಿನೆಲ್ಲೆಡೆ ಇರುವ ತನ್ನ ಪಾಲುದಾರರು, ಪ್ರತಿಸ್ಪರ್ಧಿಗಳು ಮತ್ತು ಸಂಸ್ಥೆಗಳ ಜೊತೆಗೆ ನಮ್ಮ ಭದ್ರತಾ ಕಲಿಕೆಗಳು, ಅನುಭವಗಳು ಮತ್ತು ತಂತ್ರಜ್ಞಾನಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಸುದೀರ್ಘ ಇತಿಹಾಸವನ್ನು Google ಹೊಂದಿದೆ. ಮತ್ತು ಭದ್ರತಾ ಬೆದರಿಕೆಗಳು ವಿಕಸನಗೊಂಡಂತೆ, ಬಳಕೆದಾರರನ್ನು ರಕ್ಷಿಸಲು ಮತ್ತು ಒಟ್ಟಾಗಿ ಹೆಚ್ಚು ಸುರಕ್ಷಿತ ಇಂಟರ್ನೆಟ್ ಅನ್ನು ರಚಿಸುವಂತೆ ಸಹಾಯ ಮಾಡಲು, ಈ ನಿರಂತರ ಉದ್ಯಮ-ವ್ಯಾಪಕ ಸಹಯೋಗವು ಮಹತ್ವದ್ದಾಗಿರುತ್ತದೆ.

ನಮ್ಮ ಭದ್ರತಾ ಪರಿಹಾರಗಳನ್ನು ಹಂಚಿಕೊಳ್ಳುವುದರಿಂದ ಒಟ್ಟಾಗಿ ಇಂಟರ್ನೆಟ್ ಅನ್ನು ಸುರಕ್ಷಿತವಾಗಿರಿಸಲು ನಮಗೆ ಸಹಾಯವಾಗುತ್ತದೆ

 • ಸುರಕ್ಷಿತ ಬ್ರೌಸಿಂಗ್‌ ಮೂಲಕ ಅಪಾಯಕಾರಿ ಸೈಟ್‌ಗಳು, ಆ್ಯಪ್‌ಗಳು, ಮತ್ತು ಜಾಹೀರಾತುಗಳಿಂದ ನಿಮ್ಮನ್ನು ರಕ್ಷಿಸಲಾಗುತ್ತದೆ

  ಬಳಕೆದಾರರು ಅಪಾಯಕಾರಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಲು ಪ್ರಯತ್ನಿಸಿದಾಗ, ಮಾಲ್‌ವೇರ್ ಮತ್ತು ಫಿಶಿಂಗ್ ಪ್ರಯತ್ನಗಳಿಂದ ಅವರನ್ನು ಎಚ್ಚರಿಸಲು ನಾವು ನಮ್ಮ ಸುರಕ್ಷಿತ ಬ್ರೌಸಿಂಗ್‌ ತಂತ್ರಜ್ಞಾನವನ್ನು ನಿರ್ಮಿಸಿದ್ದೇವೆ. ಸುರಕ್ಷಿತ ಬ್ರೌಸಿಂಗ್ ಕೇವಲ Chrome ಬಳಕೆದಾರರನ್ನಷ್ಟೇ ಅಲ್ಲ, ಹೆಚ್ಚಿನವರನ್ನೂ ಸಂರಕ್ಷಿಸುತ್ತದೆ – ಪ್ರತಿಯೊಬ್ಬರಿಗೂ ಇಂಟರ್ನೆಟ್ ಬಳಕೆಯನ್ನು ಸುರಕ್ಷಿತವಾಗಿಸಲು, ನಾವು ಈ ತಂತ್ರಜ್ಞಾನವನ್ನು Apple ನ Safari ಮತ್ತು Mozilla ದ Firefox ಸೇರಿದಂತೆ, ಇತರ ಕಂಪನಿಗಳು ತಮ್ಮ ಬ್ರೌಸರ್‌ಗಳಲ್ಲಿ ಉಚಿತವಾಗಿ ಬಳಸುವಂತೆ ಮಾಡಿದ್ದೇವೆ. ಇಂದು, 3 ಶತಕೋಟಿಗಿಂತ ಹೆಚ್ಚು ಸಾಧನಗಳು ಸುರಕ್ಷಿತ ಬ್ರೌಸಿಂಗ್‌ನಿಂದ ರಕ್ಷಿಸಲ್ಪಟ್ಟಿವೆ. ವೆಬ್‌ಸೈಟ್ ಮಾಲೀಕರ ಸೈಟ್‌ಗಳಲ್ಲಿ ಸುರಕ್ಷತೆಯ ದೋಷಗಳಿದ್ದರೆ, ಅವರನ್ನು ಎಚ್ಚರಿಸುತ್ತೇವೆ ಹಾಗೂ ಸಮಸ್ಯೆಗಳನ್ನು ತ್ವರಿತವಾಗಿ ಸರಿಪಡಿಸಲು ಉಚಿತ ಪರಿಕರಗಳನ್ನು ಒದಗಿಸಿ ಸಹಾಯ ಮಾಡುತ್ತೇವೆ.

 • ಇಂಟರ್ನೆಟ್ ಬ್ರೌಸ್ ಮಾಡುವಾಗ HTTPS ಎನ್‌ಕ್ರಿಪ್ಶನ್ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ

  HTTPS ಎನ್‌ಕ್ರಿಪ್ಶನ್‌ ಆಧರಿಸಿದ ನಮ್ಮ ಸೇವೆಗಳು, ನೀವು ಸೈಟ್‌ಗಳನ್ನು ಸಂಪರ್ಕಿಸಿ ಅವುಗಳಲ್ಲಿ ಕ್ರೆಡಿಟ್ ಕಾರ್ಡ್ ಸಂಖ್ಯೆಗಳಂತಹ ನಿಮ್ಮ ಖಾಸಗಿ ಮಾಹಿತಿಯನ್ನು ನಮೂದಿಸುವುದನ್ನು ಹಾಗೂ ಯಾರೊಬ್ಬರೂ ನಿಮ್ಮ ಆ ಮಾಹಿತಿಗೆ ತಡೆಯೊಡ್ಡದಂತೆ ಖಚಿತಪಡಿಸುತ್ತವೆ. ಈ ಹೆಚ್ಚುವರಿ ಭದ್ರತೆಯನ್ನು ಅಳವಡಿಸಿಕೊಳ್ಳುವಂತೆ ಇತರ ವೆಬ್‌ಸೈಟ್‌ಗಳನ್ನು ಪ್ರೋತ್ಸಾಹಿಸಲು, ನಾವು ಡೆವಲಪರ್‌ಗಳಿಗೆ ಪರಿಕರಗಳು ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತೇವೆ. HTTPS ಎನ್‌ಕ್ರಿಪ್ಶನ್ ಎಂಬುದು ನಮ್ಮ ಹುಡುಕಾಟ ಫಲಿತಾಂಶಗಳಲ್ಲಿನ ವೆಬ್‌ಸೈಟ್‌ಗಳಿಗೆ ಶ್ರೇಯಾಂಕ ನೀಡುವಾಗ, Google ಹುಡುಕಾಟದ ಅಲ್ಗಾರಿದಮ್ ಬಳಸುವ ಒಂದು ಮಾನದಂಡವಾಗಿದೆ. ಇದನ್ನು .google ಅಥವಾ .app ನಂತಹ ಉನ್ನತ ಮಟ್ಟದ ಡೊಮೇನ್‌ಗಳಿಗಾಗಿಯೂ ಸಹ ನಾವು ಬಳಸುತ್ತೇವೆ HSTS ಪೂರ್ವ ಲೋಡ್ ಮಾಡುವಿಕೆ, ಇದು ಈ ಡೊಮೇನ್‌ಗಳಲ್ಲಿ HTTPS ಬಳಸುವುದನ್ನು ಜಾರಿಗೊಳಿಸುತ್ತದೆ.

 • ಡೆವಲಪರ್‌ಗಳು ಭದ್ರತಾ ಅಪಾಯಗಳನ್ನು ತಡೆಯಲು ಸಹಾಯ ಮಾಡುವಂತೆ, ಅವರಿಗೆ ಭದ್ರತಾ ಪರಿಕರಗಳನ್ನು ಲಭ್ಯಗೊಳಿಸುವಿಕೆ

  ನಮ್ಮ ಭದ್ರತಾ ತಂತ್ರಜ್ಞಾನವು ಇತರರಿಗೆ ಮೌಲ್ಯವನ್ನು ಒದಗಿಸಬಹುದು ಎಂದು ನಾವು ನಂಬಿದಾಗಲೆಲ್ಲಾ ಅದನ್ನು ನಾವು ಹಂಚಿಕೊಳ್ಳುತ್ತೇವೆ. ಉದಾಹರಣೆಗೆ, ನಾವು ನಮ್ಮ Google Cloud Security Scanner ಅನ್ನು ಡೆವಲಪರ್‌ಗಳಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತೇವೆ, ಇದರಿಂದ ಅವರು App Engine ನಲ್ಲಿ ತಮ್ಮ ವೆಬ್ ಅಪ್ಲಿಕೇಶನ್‌ಗಳನ್ನು ಭದ್ರತಾ ದೌರ್ಬಲ್ಯಗಳಿಗಾಗಿ ಸ್ಕ್ಯಾನ್ ಮಾಡಬಹುದು ಮತ್ತು ವಿಶ್ಲೇಷಿಸಬಹುದು.

 • ಸುದ್ದಿ ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸದಂತೆ ಪ್ರಾಜೆಕ್ಟ್ ಶೀಲ್ಡ್ ತಡೆಯುತ್ತದೆ

  [ಪ್ರಾಜೆಕ್ಟ್ ಶೀಲ್ಡ್] (https://projectshield.withgoogle.com/public/) ಎಂಬುದು ಸುದ್ದಿ, ಮಾನವ ಹಕ್ಕುಗಳು ಮತ್ತು ಚುನಾವಣಾ ಸೈಟ್‌ಗಳನ್ನು, denial-of-service (DDoS) ದಾಳಿಯಿಂದ ರಕ್ಷಿಸಲು ನಮ್ಮ ತಂತ್ರಜ್ಞಾನವನ್ನು ಬಳಸುವ ಒಂದು ಸೇವೆಯಾಗಿದೆ. ಈ ದಾಳಿಗಳು ವೆಬ್‌ಸೈಟ್‌ಗಳನ್ನು ತೆಗೆದುಹಾಕುವ ಪ್ರಯತ್ನಗಳಾಗಿರುತ್ತವೆ ಮತ್ತು ಅಗಾಧವಾದ ನಕಲಿ ಟ್ರಾಫಿಕ್‌‌ನ ಮೂಲಕ ಮತದಾರರನ್ನು ಪ್ರಮುಖ ಮಾಹಿತಿಯನ್ನು ಪ್ರವೇಶಿಸುವುದರಿಂದ ತಡೆಗಟ್ಟುತ್ತವೆ. ವೆಬ್‌ಸೈಟ್‌ನ ಗಾತ್ರ ಅಥವಾ ಆಕ್ರಮಣದ ಗಾತ್ರವನ್ನು ಲೆಕ್ಕಿಸದೇ, ಪ್ರಾಜೆಕ್ಟ್ ಶೀಲ್ಡ್ ಯಾವಾಗಲೂ ಉಚಿತವಾಗಿದೆ.

ಉದ್ಯಮದ ಅತಿಮುಖ್ಯ ಭದ್ರತಾ ನಾವೀನ್ಯತೆ ಮತ್ತು ಪಾರದರ್ಶಕತೆ

 • ನಮ್ಮ ಪ್ರಬಲ ಭದ್ರತೆಯ ಮೂಲಕ ಉದ್ದೇಶಿತ ದಾಳಿಗಳಿಂದ ಅಪಾಯದಲ್ಲಿರುವ ಬಳಕೆದಾರರ ರಕ್ಷಣೆ

  ಅತ್ಯಂತ ಭದ್ರತಾ-ಪ್ರಜ್ಞೆಯ ಬಳಕೆದಾರರು ಕೂಡ ಫಿಶಿಂಗ್ ಸ್ಕ್ಯಾಮ್‌ಗಳು ಅಥವಾ ಇತರ ಅತ್ಯಾಧುನಿಕ ಮತ್ತು ಹೆಚ್ಚು ಉದ್ದೇಶಿತ ದಾಳಿಗಳಿಂದ ಮೋಸಹೋಗಬಹುದು. ಸುಧಾರಿತ ಸಂರಕ್ಷಣಾ ಪ್ರೋಗ್ರಾಂ ಎಂಬುದು Google ನ ಅತ್ಯಂತ ಪ್ರಬಲ ಭದ್ರತಾ ಕೊಡುಗೆಯಾಗಿದ್ದು, ಇದನ್ನು ಉದ್ದೇಶಿತ ದಾಳಿಗಳ ಹೆಚ್ಚಿನ ಅಪಾಯದಲ್ಲಿರುವ ವೈಯಕ್ತಿಕ Google ಖಾತೆಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ, ನೀತಿ ನಿರ್ವಾಹಕರು, ಅಭಿಯಾನದ ತಂಡಗಳು, ಪತ್ರಕರ್ತರು, ಕಾರ್ಯಕರ್ತರು, ವ್ಯವಹಾರ ಮುಖಂಡರು ಅಥವಾ ಅತ್ಯಾಧುನಿಕ ಡಿಜಿಟಲ್ ದಾಳಿಗೆ ತಾವು ಗುರಿಯಾಗಬಹುದೆಂದು ನಂಬುವ ಯಾರಾದರೂ.

 • ಸುರಕ್ಷಿತ ಇಂಟರ್ನೆಟ್‌ ಅನ್ನು ಪೋಷಿಸಲು ನಮ್ಮ ಪದ್ಧತಿಗಳು ಮತ್ತು ಮಾರ್ಗಸೂಚಿಗಳನ್ನು ಕುರಿತ ಡೇಟಾ ಹಂಚಿಕೊಳ್ಳುವಿಕೆ

  2010 ರಿಂದ, ಸುರಕ್ಷಿತ ಬ್ರೌಸಿಂಗ್‌ನಂತಹ ಭದ್ರತಾ ಉಪಕ್ರಮಗಳು ಹಾಗೂ ಫಿಶಿಂಗ್ ಮತ್ತು ಮಾಲ್‌ವೇರ್‌ ಪತ್ತೆ ಹಚ್ಚುವಿಕೆಯಂತಹ ವಿಷಯಗಳ ಅಂಕಿಅಂಶಗಳನ್ನು ಒಳಗೊಂಡಿರುವ [ಪಾರದರ್ಶಕತೆ ವರದಿ] (https://transparencyreport.google.com) ಅನ್ನು ನಾವು ಪ್ರಕಟಿಸಿದ್ದೇವೆ. ಅಲ್ಲದೆ, ವೆಬ್‌ಸೈಟ್‌ಗಳು ಮತ್ತು ಇಮೇಲ್‌ಗಳಿಗಾಗಿರುವ ಎನ್‌ಕ್ರಿಪ್ಶನ್‌ನ ಉದ್ಯಮದ ಅಳವಡಿಕೆ ಕುರಿತ ಡೇಟಾವನ್ನು ಸಹ ನಾವು ಹಂಚಿಕೊಳ್ಳುತ್ತೇವೆ. ನಾವು ಇದನ್ನು ಮಾಡುವುದು ಕೇವಲ ನಮ್ಮ ಪ್ರಗತಿಯನ್ನು ನಮ್ಮ ಬಳಕೆದಾರರೊಂದಿಗೆ ಹಂಚಿಕೊಳ್ಳುವುದಕ್ಕಷ್ಟೇ ಅಲ್ಲ, ಜೊತೆಗೆ ಎಲ್ಲರಿಗೂ ಸುರಕ್ಷಿತವಾದ ಇಂಟರ್ನೆಟ್ ದೊರಕಿಸುವ ಹಿತಾಸಕ್ತಿಯಲ್ಲಿ ಪ್ರಬಲ ಭದ್ರತಾ ಗುಣಮಟ್ಟವನ್ನು ಅಳವಡಿಸಿಕೊಳ್ಳುವಂತೆ ಇತರರನ್ನು ಪ್ರೋತ್ಸಾಹಿಸಲು ಸಹ ಆಗಿದೆ.

ಉದ್ಯಮದಾದ್ಯಂತ ಭದ್ರತೆಯನ್ನು ಹೆಚ್ಚಿಸಲು ಗುಣಮಟ್ಟಗಳನ್ನು ಸುಧಾರಿಸುವ ಕುರಿತು

 • ಭದ್ರತಾ ದೌರ್ಬಲ್ಯಗಳನ್ನು ಬಹಿರಂಗಪಡಿಸಲು ಭದ್ರತಾ ಪುರಸ್ಕಾರಗಳ ರಚನೆ

  ನಮ್ಮ ಸೇವೆಗಳಲ್ಲಿನ ದೌರ್ಬಲ್ಯಗಳನ್ನು ಕಂಡುಹಿಡಿಯುವ ಸ್ವತಂತ್ರ ಸಂಶೋಧಕರಿಗೆ ಹಣ ಪಾವತಿಸುವುದಕ್ಕಾಗಿ Google ನಲ್ಲಿ ನಾವು ದೌರ್ಬಲ್ಯ ಪುರಸ್ಕಾರ ಪ್ರೋಗ್ರಾಂಗಳನ್ನು ಆರಂಭಗೊಳಿಸಿದ್ದೇವೆ. ನಮ್ಮ ಬಳಕೆದಾರರನ್ನು ಸುರಕ್ಷಿತವಾಗಿರಿಸಿಕೊಳ್ಳುವಲ್ಲಿ ಸಹಾಯ ಮಾಡುವ ಎಲ್ಲಾ ನವನವೀನ ಬಾಹ್ಯ ಕೊಡುಗೆಗಳನ್ನು ಪುರಸ್ಕರಿಸಲು, ನಾವು ಸಂಶೋಧನಾ ಅನುದಾನಗಳು ಮತ್ತು ದೋಷ ಕೊಡುಗೆಗಳಿಗೆ ಪ್ರತಿವರ್ಷ ಮಿಲಿಯನ್‌ಗಳಷ್ಟು ಡಾಲರ್‌ಗಳ ಪ್ರಶಸ್ತಿಯನ್ನು ನೀಡುತ್ತೇವೆ. ಪ್ರಸ್ತುತ Chrome ಮತ್ತು Android ಸೇರಿದಂತೆ, ನಮ್ಮ ಹಲವಾರು ಉತ್ಪನ್ನಗಳಿಗೆ ದೌರ್ಬಲ್ಯ ಪುರಸ್ಕಾರಗಳನ್ನು ನೀಡುತ್ತೇವೆ.

  ಸ್ವತಂತ್ರ ಸಂಶೋಧಕರನ್ನು ತೊಡಗಿಸುವುದರ ಜೊತೆಗೆ, ನಾವು ಪ್ರಾಜೆಕ್ಟ್ ಝೀರೋ ಎಂದು ಕರೆಯಲ್ಪಡುವ ಆಂತರಿಕ ಇಂಜಿನಿಯರ್‌ಗಳ ತಂಡವೊಂದನ್ನು ಕೂಡಾ ಹೊಂದಿದ್ದೇವೆ. ಇದು ಕೂಡ ಇಂಟರ್ನೆಟ್‌ನಲ್ಲಿ ಬಳಸಲಾಗುವ ಸಾಫ್ಟ್‌ವೇರ್‌‌ನಲ್ಲಿನ ಭದ್ರತಾ ನ್ಯೂನತೆಗಳನ್ನು ಟ್ರ್ಯಾಕ್ ಮಾಡಿ, ಅವುಗಳನ್ನು ಪರಿಹರಿಸುತ್ತದೆ.

 • ಭದ್ರತಾ ಪರಿಹಾರಗಳನ್ನು ಮುನ್ನಡೆಸಲು ಉನ್ನತ ಸಂಶೋಧಕರ ಜೊತೆಗೆ ಸಹಯೋಗ

  ಭದ್ರತೆ, ಗೌಪ್ಯತೆ ಮತ್ತು ನಿಂದನಾ ವಿರೋಧಿ ಸಂಶೋಧನೆಯ ಸ್ಥಿತಿಯನ್ನು ಮುನ್ನಡೆಸಲು, ನಮ್ಮ ಸಂಶೋಧಕರು ಶೈಕ್ಷಣಿಕ, ಉದ್ಯಮ ಗುಂಪುಗಳು, ಮತ್ತು ಸರ್ಕಾರೇತರ ಸಂಸ್ಥೆಗಳ (NGO) ಪಾಲುದಾರರೊಂದಿಗೆ ವ್ಯಾಪಕವಾಗಿ ಸಹಯೋಗ ನೀಡುತ್ತಾರೆ. ಸಕ್ರಿಯ ಸಹಯೋಗದ ಮೂಲಕ ಎಲ್ಲೆಡೆಯೂ ಬಳಕೆದಾರರನ್ನು ರಕ್ಷಿಸಲು ನಾವು ಪರಿವರ್ತಕ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಮತ್ತು ನಮ್ಮ ಸಂಶೋಧಕರು ತಮ್ಮ ಪರಿಣತಿಯನ್ನು ನೀಡುವ ಮೂಲಕ ಮತ್ತು Google ಸಂಪನ್ಮೂಲಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಮಹತ್ವಾಕಾಂಕ್ಷೆಯ ಸಂಶೋಧನಾ ಯೋಜನೆಗಳನ್ನು ಬೆಂಬಲಿಸುತ್ತಿದ್ದಾರೆ.

 • ನಿಮ್ಮ ಸೈನ್-ಇನ್ ಅನ್ನು ಸಾಧ್ಯವಾದಷ್ಟು ಸುರಕ್ಷಿತವಾಗಿರಿಸಲು, ಪ್ರಮಾಣೀಕರಣದ ಗುಣಮಟ್ಟವನ್ನು ಏರಿಸುವಿಕೆ

  ವೆಬ್‌ನಲ್ಲಿ ಪ್ರಬಲವಾದ ಸೈನ್-ಇನ್ ಮತ್ತು ದೃಢೀಕರಣ ಗುಣಮಟ್ಟಗಳನ್ನು ಸಹ-ರಚಿಸುವಲ್ಲಿ ಅಥವಾ ಅಳವಡಿಸಿಕೊಳ್ಳುವುದರಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿದ್ದೇವೆ. ಕೇಂದ್ರೀಕೃತವಾದ ವೆಬ್ ಗುಣಮಟ್ಟಗಳನ್ನು ಅಭಿವೃದ್ಧಿಪಡಿಸುವ ಮೂಲಕ, ನಾವು ಉದ್ಯಮದಾದ್ಯಂತ ಸಹಯೋಗ ನೀಡುತ್ತೇವೆ ಮತ್ತು ತಂತ್ರಜ್ಞಾನವನ್ನು ಹಂಚಿಕೊಳ್ಳುತ್ತೇವೆ. ಲಾಭರಹಿತ ಸಂಸ್ಥೆ FIDO Alliance ನೊಂದಿಗಿನ ಅಂತಹ ಒಂದು ಪಾಲುದಾರಿಕೆಯು, ಕಂಪನಿಗಳಿಗಾಗಿ ಬಳಸಲು ಹೊಸ ಉದ್ಯಮ ಗುಣಮಟ್ಟಗಳನ್ನು ಹೊಂದಿಸಿದೆ ಮತ್ತು ನಿಯೋಜಿಸಿದೆ. ಜೊತೆಗೆ, ಅವರ ಉದ್ಯೋಗಿಗಳಿಗೆ ಸುರಕ್ಷಿತ ಖಾತೆಯ ಪ್ರವೇಶವನ್ನೂ ಖಾತ್ರಿಪಡಿಸಿದೆ.

 • ಎಲ್ಲರಿಗೂ ಉತ್ತಮ ಭದ್ರತೆಯನ್ನು ನೀಡಲು, ಸಮಾಜ ಕಲ್ಯಾಣ ಮತ್ತು ಆನ್‌ಲೈನ್ ಸುರಕ್ಷತೆಯ ತರಬೇತಿ ಒದಗಿಸುವುದು

  ಆನ್‌ಲೈನ್‌ನಲ್ಲಿ ಹೇಗೆ ಸುರಕ್ಷಿತರಾಗಿರಬಹುದು ಎಂಬುದನ್ನು ಪ್ರಪಂಚದಾದ್ಯಂತದ ಜನರು ತಿಳಿದುಕೊಳ್ಳುವಂತೆ ಸಹಾಯ ಮಾಡಲು, ನಾವು ಶೈಕ್ಷಣಿಕ ಸಾಮಗ್ರಿಗಳು, ತರಬೇತಿ ಮತ್ತು ಪರಿಕರಗಳನ್ನು ಒದಗಿಸುತ್ತೇವೆ. ನಮ್ಮ ಸಮಾಜ ಕಲ್ಯಾಣ ತಂಡವು ಆನ್‌ಲೈನ್ ​​ಸುರಕ್ಷತೆ ಸಂಪನ್ಮೂಲಗಳು ಮತ್ತು ತರಬೇತಿಯ ಮೂಲಕ - ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಹಿರಿಯರು ಮತ್ತು ಅಂಗವೈಕಲ್ಯವನ್ನು ಹೊಂದಿರುವ ವ್ಯಕ್ತಿಗಳು ಸೇರಿದಂತೆ - ವಾರ್ಷಿಕವಾಗಿ 100 ದಶಲಕ್ಷಕ್ಕೂ ಹೆಚ್ಚು ಜನರನ್ನು ತಲುಪುತ್ತದೆ.

ನಮ್ಮ ಸುರಕ್ಷತೆ ಪ್ರಯತ್ನಗಳ ಬಗ್ಗೆ ಇನ್ನಷ್ಟು ತಿಳಿಯಿರಿ

ನಿಮ್ಮ ಭದ್ರತೆ

ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಭದ್ರತೆಯ ಮೂಲಕ ನಾವು ನಿಮ್ಮನ್ನು ಆನ್‌ಲೈನ್‌ನಲ್ಲಿ ರಕ್ಷಿಸುತ್ತೇವೆ.

ನಿಮ್ಮ ಗೌಪ್ಯತೆ

ಎಲ್ಲರಿಗೂ ಹೊಂದುವ ಗೌಪ್ಯತೆಯನ್ನು ನಾವು ಒದಗಿಸುತ್ತೇವೆ.

ಕುಟುಂಬಗಳಿಗಾಗಿ

ನಿಮ್ಮ ಕುಟುಂಬಕ್ಕೆ ಆನ್‌ಲೈನ್‌ನಲ್ಲಿ ಯಾವುದು ಸೂಕ್ತವಾಗಿದೆ ಎಂಬುದನ್ನು ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.