"ಡೇಟಾ ಭದ್ರತೆಯು ಸಂಕೀರ್ಣವಾಗಿರಬಾರದು."
Google 2019 ರಿಂದ ಮ್ಯೂನಿಚ್‌ನಲ್ಲಿರುವ Google ಸುರಕ್ಷತಾ ಎಂಜಿನಿಯರಿಂಗ್ ಕೇಂದ್ರದಲ್ಲಿ (GSEC) ಇಂಟರ್ನೆಟ್‌ನಲ್ಲಿನ ಡೇಟಾ ಗೌಪ್ಯತೆ ಮತ್ತು ಡೇಟಾ ಭದ್ರತೆಯ ಮೇಲೆ ಗಮನ ಕೇಂದ್ರೀಕರಿಸಿದೆ. GSEC ನಲ್ಲಿನ ಇತ್ತೀಚಿನ ಬೆಳವಣಿಗೆಗಳು, ಅವರ ತಂಡದ ಕಾರ್ಯವಿಧಾನಗಳು ಹಾಗೂ ಡಿಜಿಟಲ್ ಎಕ್ಸೆಲೆನ್ಸ್ ಕೇಂದ್ರವಾಗಿ ಮ್ಯೂನಿಚ್‌ನ ಸ್ಥಾನ ಇವೆಲ್ಲವುಗಳ ಕುರಿತು ಸೈಟ್ ಲೀಡ್ ಆದ ವೀಲ್ಯಾಂಡ್ ಹಾಲ್‌ಫೆಲ್ಡರ್ ಅವರು ಚರ್ಚೆ ನಡೆಸಿದ್ದಾರೆ.
ಡಾ. ಹಾಲ್‌ಫೆಲ್ಡರ್, Google ಸುರಕ್ಷತಾ ಎಂಜಿನಿಯರಿಂಗ್ ಕೇಂದ್ರ ಅಥವಾ ಸಂಕ್ಷಿಪ್ತವಾಗಿ GSEC ಅನ್ನು 2019 ರಲ್ಲಿ ಮ್ಯೂನಿಚ್‌ನಲ್ಲಿ ತೆರೆಯಲಾಯಿತು. ಆ ಕೇಂದ್ರದಲ್ಲಿ ಯಾವ ರೀತಿಯ ಕೆಲಸಗಳು ನಡೆಯುತ್ತವೆ?
GSEC ಎಂಬುದು Google ನ ಗೌಪ್ಯತೆ ಮತ್ತು ಭದ್ರತಾ ಎಂಜಿನಿಯರಿಂಗ್‌ನ ಜಾಗತಿಕ ಹಬ್ ಆಗಿದೆ. ಇಂಟರ್ನೆಟ್ ಭದ್ರತೆಯನ್ನು ಸುಧಾರಿಸಲು, ಇಲ್ಲಿ ನಾವು ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತೇವೆ, ಬಳಕೆದಾರರ ಅಗತ್ಯತೆಗಳನ್ನು ಗುರುತಿಸುತ್ತೇವೆ, ನಮ್ಮ ಪಾಲುದಾರರ ಜೊತೆ ನಮ್ಮ ಜ್ಞಾನ ಹಾಗೂ ಕೆಲಸವನ್ನು ಹಂಚಿಕೊಳ್ಳುತ್ತೇವೆ.
ಡೇಟಾ ಗೌಪ್ಯತೆ ಹಾಗೂ ಭದ್ರತೆ ಎಂಬುದು ಜರ್ಮನಿಯಲ್ಲಿ ಅತಿ ಮುಖ್ಯ ವಿಷಯವಾಗಿದೆ. ಇಲ್ಲಿ Google ಸುರಕ್ಷತಾ ಎಂಜಿನಿಯರಿಂಗ್ ಕೇಂದ್ರವನ್ನು ಸ್ಥಾಪಿಸುವಲ್ಲಿ ಈ ಸ್ಥಳೀಯ ಅಂಶಗಳು ಎಷ್ಟು ಮುಖ್ಯವಾಗಿವೆ?
ಬಹಳ ಮುಖ್ಯವಾಗಿವೆ. ಯುರೋಪಿನ ಹೃದಯ ಭಾಗದಲ್ಲಿ ಡೇಟಾ ಗೌಪ್ಯತೆ ಹಾಗೂ ಭದ್ರತೆಗಾಗಿ ನಾವು ಡೆವಲಪ್‌ಮೆಂಟ್ ತಂಡಗಳನ್ನು ಸೆಟಪ್ ಮಾಡಿರುವುದು ಕಾಕತಾಳೀಯವಲ್ಲ. ಆನ್‌ಲೈನ್ ಗೌಪ್ಯತೆ ಮತ್ತು ಭದ್ರತೆ ಬಗ್ಗೆ ಯುರೋಪಿಯನ್ನರು ಹೇಗೆ ಯೋಚಿಸುತ್ತಾರೆ ಎಂಬುದನ್ನು ಪ್ರತಿಬಿಂಬಿಸುವ ಸುದೀರ್ಘ ಸಂಪ್ರದಾಯವನ್ನು ಜರ್ಮನಿ ಹೊಂದಿದೆ, ಹಾಗಾಗಿ Google ನ ಎಂಜಿನಿಯರಿಂಗ್ ಕೇಂದ್ರವನ್ನು ಮೊದಲ ಬಾರಿಗೆ ಮ್ಯೂನಿಚ್‌ನಲ್ಲಿ ಸ್ಥಾಪಿಸಿದಾಗ, ಅಲ್ಲಿ ನಿಯೋಜಿಸಿದ ಮೊದಲ ತಂಡಗಳಲ್ಲಿ ಇವು ಒಂದಾಗಿವೆ. ಮ್ಯೂನಿಚ್‌ನಲ್ಲಿ ಈ ತಂಡಗಳನ್ನು ಅಭಿವೃದ್ಧಿಪಡಿಸಿದ ಹತ್ತು ವರ್ಷಗಳ ನಂತರ, ನಾವು ಅದರ ವ್ಯಾಪ್ತಿಯನ್ನು ವಿಸ್ತರಿಸಲು, ವಿವಿಧ ಹಿನ್ನೆಲೆಗಳ ಪ್ರಮಖ ಸ್ಟೇಕ್‌ಹೋಲ್ಡರ್‌ಗಳು ಮತ್ತು ಬಳಕೆದಾರರ ಜೊತೆ ಸಂವಾದ ನಡೆಸಲು ಹಾಗೂ ಅವರೊಂದಿಗೆ ತೊಡಗಿಸಿಕೊಳ್ಳಲು ನಾವು ಬಯಸಿದ್ದೆವು. ಈ ಕಾರಣದಿಂದಲೇ, ಈ ವಿಷಯಗಳ ಕುರಿತು ವಿಶೇಷ ಗಮನಹರಿಸಿರುವ GSEC ಅನ್ನು ಮ್ಯೂನಿಚ್‌ನಲ್ಲಿ ಸೆಟಪ್ ಮಾಡಲಾಗಿದೆ. ನಮ್ಮ ಎಲ್ಲಾ ಉತ್ಪನ್ನಗಳು ಯುರೋಪಿಯನ್ ಸಾಮಾನ್ಯ ಡೇಟಾ ಸಂರಕ್ಷಣಾ ನಿಯಮಗಳ (GDPR) ಅಗತ್ಯತೆಗಳನ್ನು ಪೂರೈಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿದ್ದೇವೆ. ಈ ವಿಷಯಗಳ ಕುರಿತ ತಿಳುವಳಿಕೆ ಹಾಗೂ ಜಾಗೃತಿಯು ಇತರ ದೇಶಗಳಿಗೂ ವಿಸ್ತರಿಸುತ್ತಿವೆ. ವಾಸ್ತವದಲ್ಲಿ, ವಿಶ್ವದಾದ್ಯಂತ ಡೇಟಾ ಗೌಪ್ಯತೆ ಮತ್ತು ಭದ್ರತೆಯು ಹೆಚ್ಚು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ.
GSEC, 40 ವಿವಿಧ ದೇಶಗಳ ಸಿಬ್ಬಂದಿಯೊಂದಿಗೆ ಕೆಲಸ ಮಾಡುವಂತಹ ಒಂದು ಅಂತಾರಾಷ್ಟ್ರೀಯ ಸ್ಥಳವಾಗಿದೆ.
ಅಂತಾರಾಷ್ಟ್ರೀಯ ಉತ್ಪನ್ನಗಳೊಂದಿಗೆ ಕೆಲಸ ಮಾಡುವುದೆಂದರೆ ನಾವು ವಿವಿಧ ದೃಷ್ಟಿಕೋನಗಳನ್ನು ಹೊಂದಿರಬೇಕಾಗುತ್ತದೆ. ನಮ್ಮ ಸಿಬ್ಬಂದಿಯು ವಿಶ್ವದ ಬಹುಪಾಲು ಜನರನ್ನು ಪ್ರತಿನಿಧಿಸಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಹಾಗಿದ್ದರೂ, ಪ್ರಸ್ತುತ ನಾವು ಇನ್ನೂ ನಮ್ಮ ಗುರಿಯನ್ನು ತಲುಪಿಲ್ಲ ಹಾಗೂ ದೀರ್ಘಾವಧಿಯ ಗುರಿಯಾಗಿ, ಲಿಂಗದ ಆಧಾರದ ಮೇಲೆ ಹಾಗೂ ಆ ಭೇದವಿಲ್ಲದಿರುವ ವೈವಿಧ್ಯಮಯ ತಂಡಗಳನ್ನು ಕಟ್ಟಲು ನಾವು ಬದ್ಧರಾಗಿದ್ದೇವೆ, ಉದಾಹರಣೆಗೆ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿನ ಮಹಿಳಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಅಥವಾ ಮಾರ್ಗದರ್ಶನ ನೀಡುವ ಕಾರ್ಯಕ್ರಮದಲ್ಲಿ ನಮ್ಮ ಸ್ಥಳೀಯ ವಿಶ್ವವಿದ್ಯಾಲಯಗಳ ಜೊತೆ ಪಾಲುದಾರರಾಗುವ ಮೂಲಕ ಮಹಿಳಾ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವುದು.
GSEC ನಲ್ಲಿ ನಿಮ್ಮ ಸಾಮಾನ್ಯದ ಕೆಲಸದ ಸ್ವರೂಪ ಹೇಗಿರುತ್ತದೆ?
Google ಖಾತೆ ಮತ್ತು Google Chrome ಬ್ರೌಸರ್‌ನಂತಹ Google ಉತ್ಪನ್ನಗಳ ಕುರಿತು ಪ್ರತಿದಿನ ಕೆಲಸ ಮಾಡುವ 200 ಕ್ಕೂ ಹೆಚ್ಚು ಗೌಪ್ಯತೆ ಇಂಜಿನಿಯರ್‌ಗಳನ್ನು ನಾವು ಹೊಂದಿದ್ದೇವೆ. ಭದ್ರತಾ ತರಬೇತಿ ಹಾಗೂ ಡಿಫರೆನ್ಷಿಯಲ್ ಪ್ರೈವಸಿ ಕೋಡ್‌ಲ್ಯಾಬ್‌ಸ್‌ನಂತಹ ಈವೆಂಟ್‌ಗಳನ್ನೂ ಒಳಗೊಂಡಂತೆ ಆಸಕ್ತರಿಗಾಗಿ ನಾವು ಕಾರ್ಯಾಗಾರಗಳನ್ನೂ ಸಹ ಏರ್ಪಡಿಸುತ್ತೇವೆ. ಇದು ನನಗೆ ವಿಶೇಷವಾಗಿ ಮುಖ್ಯವಾಗಿದೆ ಏಕೆಂದರೆ, ಪರಿಸ್ಥಿತಿಯು ಬಹಳ ವೇಗವಾಗಿ ಬದಲಾಗುತ್ತಿದೆ ಹಾಗೂ ಇಂಟರ್ನೆಟ್ ಭದ್ರತೆ ವಿಷಯದ ಕುರಿತು ನಾವು ಇನ್ನಷ್ಟು ಮಾಹಿತಿಯನ್ನು ಒದಗಿಸಲು ಬಯಸುತ್ತೇವೆ.
ಇಂಟರ್ನೆಟ್ ಬಳಕೆದಾರರಿಗೆ ಪ್ರತಿದಿನ ಎದುರಾಗಬಹುದಾದ ಯಾವ ರೀತಿಯ ಕೆಲಸಗಳನ್ನು ನೀವು ಮಾಡುತ್ತೀರಿ?
ಉದಾಹರಣೆಗೆ, ನೀವು Google ಉತ್ಪನ್ನಗಳನ್ನು ಬಳಸುವಾಗ ನಿಮಗೆ ಉತ್ತಮ ಫಲಿತಾಂಶಗಳನ್ನು ಒದಗಿಸಲು ವೈಯಕ್ತೀಕರಣಕ್ಕಾಗಿ ಯಾವ ರೀತಿಯ ಡೇಟಾವನ್ನು ಬಳಸಲಾಗಿದೆ ಎಂಬುದರ ಕುತೂಹಲ ನಿಮಗೆ ಮೂಡಿರಬಹುದು. ವಿವಿಧ ಉತ್ಪನ್ನಗಳಾದ್ಯಂತ Google ನಿಮಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಲು, ನಿಮ್ಮ ಮಾಹಿತಿ, ಗೌಪ್ಯತೆ ಮತ್ತು ಭದ್ರತೆಯನ್ನು ನಿರ್ವಹಿಸಲು Google ಖಾತೆ ನಿಮಗೆ ಸಹಾಯ ಮಾಡುತ್ತದೆ. ಚಟುವಟಿಕೆ ನಿಯಂತ್ರಣಗಳು ಮತ್ತು ಜಾಹೀರಾತು ಸೆಟ್ಟಿಂಗ್‌ಗಳಂತಹ ನಿಯಂತ್ರಣಗಳು ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸಲು ಯಾವ ಡೇಟಾವನ್ನು ಬಳಸಬೇಕು ಎಂಬುದನ್ನು ನಿರ್ಧರಿಸಲು ನಿಮಗೆ ಅನುಮತಿಸುತ್ತದೆ, ಹಾಗಾಗಿ Google ನ ಎಲ್ಲಾ ಸೇವೆಗಳು ನಿಮಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು. ಈ ಉದ್ದೇಶಕ್ಕಾಗಿ, ನಾವು [ಗೌಪ್ಯತೆ ಪರಿಶೀಲನೆಯನ್ನು] ಅಭಿವೃದ್ಧಿಪಡಿಸಿದ್ದೇವೆ Privacy Checkup, ನಿಮ್ಮ Google ಖಾತೆಯಲ್ಲಿ ನಿಮ್ಮ ಗೌಪ್ಯತೆ ಆದ್ಯತೆಗಳನ್ನು ತ್ವರಿತವಾಗಿ ಸೆಟ್ ಮಾಡಲು ಅದು ನಿಮಗೆ ಅವಕಾಶ ಮಾಡಿಕೊಡುತ್ತದೆ. Chrome ಮತ್ತು Android ಗಾಗಿ ನಾವು ಪಾಸ್‌ವರ್ಡ್ ನಿರ್ವಾಹಕವನ್ನು ಅಭಿವೃದ್ಧಿಪಡಿಸಿದ್ದೇವೆ, ಅದರಿಂದ ನೀವು ಬಳಸುವ ಪ್ರತಿ ವೆಬ್‌ಸೈಟ್ ಮತ್ತು ಆ್ಯಪ್‌ಗಾಗಿ ಬೇಡಿಕೆಯ ಮೇರೆಗೆ ಪಾಸ್‌ವರ್ಡ್ ಅನ್ನು ಸ್ವಯಂಚಾಲಿತವಾಗಿ ರಚಿಸುತ್ತದೆ ಮತ್ತು ಸಂಗ್ರಹಿಸುತ್ತದೆ. ಭದ್ರತಾ ಸಮಸ್ಯೆಗಳಿಗಾಗಿ ಬಳಕೆದಾರರು ಅವರ ಪಾಸ್‌ವರ್ಡ್‌ಗಳನ್ನು ವಿಶ್ಲೇಷಿಸಲು ಪಾಸ್‌ವರ್ಡ್ ಪರೀಕ್ಷೆಯನ್ನು ಸಹ ಬಳಸಬಹುದು. ನಮಗೆ ತಿಳಿದಿರುವ ಡೇಟಾ ಉಲ್ಲಂಘನೆಯಲ್ಲಿ ಅವರ ಪಾಸ್‌ವರ್ಡ್ ಅಪಾಯಕ್ಕೀಡಾಗಿರುವುದರ ಕುರಿತು ತಿಳಿದುಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆ. ನಂತರ, ಅವರ ಪಾಸ್‌ವರ್ಡ್‌ಗಳನ್ನು ಬದಲಾಯಿಸುವುದು ಹೇಗೆ ಎಂಬುದರ ಕುರಿತು ಸೂಚನೆಗಳನ್ನು ಅವರಿಗೆ ನೀಡಲಾಗುತ್ತದೆ. ಈ ಪಾಸ್‌ವರ್ಡ್ ಸುರಕ್ಷತೆ ಪರಿಕರಗಳ ಕುರಿತಂತೆ GSEC ಮಾಡಿದ ಕೆಲಸದ ಬಗ್ಗೆ ನಾನು ವಿಶೇಷವಾಗಿ ಹೆಮ್ಮೆಪಡುತ್ತೇನೆ.
ಏಕೆ ಎಂದು ವಿವರಿಸಬಲ್ಲಿರಾ?
ಫಿಶಿಂಗ್ ವೆಬ್‌ಸೈಟ್‌ಗಳಿಗೆ ಪಾಸ್‌ವರ್ಡ್ ನಿರ್ವಾಹಕವನ್ನು ಮೋಸಗೊಳಿಸಲು ಸಾಧ್ಯವಾಗುವುದಿಲ್ಲ ಹಾಗೂ ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲದೆ ಪ್ರತಿ ವೆಬ್‌ಸೈಟ್‌ಗಾಗಿ ಹೊಸ, ಸದೃಢ ಪಾಸ್‌ವರ್ಡ್ ಅನ್ನು ನೀವು ರಚಿಸಬಹುದು. ಇದು ಹ್ಯಾಕರ್‌ಗಳು ಪಾಸ್‌ವರ್ಡ್‌ಗಳನ್ನು ಊಹಿಸದಂತೆ ತಡೆಯುತ್ತದೆ – ಹಾಗೂ ಹಲವು ಸೈಟ್‌ಗಳಿಗಾಗಿ ಒಂದೇ ಪಾಸ್‌ವರ್ಡ್ ಅನ್ನು ಬಳಸುವುದರಿಂದ ನಿಮ್ಮನ್ನು ತಡೆಯುತ್ತದೆ.
ಅದು ಯಾವ ರೀತಿಯಲ್ಲಿ ಸಮಸ್ಯೆ ಉಂಟುಮಾಡುತ್ತದೆ?
ನನ್ನ ಹೆಂಡತಿಗಾಗಿ ನಾನು ಹೂಗಳನ್ನು ಆರ್ಡರ್ ಮಾಡುತ್ತಿದ್ದೇನೆ ಎಂದುಕೊಳ್ಳೋಣ ಹಾಗೂ ಆ ಸೈಟ್‌ನಲ್ಲಿ ನನ್ನ ಗ್ರಾಹಕ ಖಾತೆಗಾಗಿ ನಾನು ಬೇರೆಡೆಯೂ ಬಳಸುವ ಪಾಸ್‌ವರ್ಡ್ ಅನ್ನು ನಾನು ಅವಸರದಲ್ಲಿ ನಮೂದಿಸುತ್ತೇನೆ. ಹೂ ಅಂಗಡಿಗೆ ಸಂಬಂಧಿಸಿದ ಸರ್ವರ್ ಅನ್ನು ಪ್ರವೇಶಿಸಲು ಹ್ಯಾಕರ್‌ಗಳಿಗೆ ಸಾಧ್ಯವಾದರೆ ಹಾಗೂ ಈ ಪಾಸ್‌ವರ್ಡ್ ಅವರಿಗೆ ಗೊತ್ತಾದರೆ, ನನ್ನ ಇಮೇಲ್ ಖಾತೆ ಅಥವಾ Google ಖಾತೆಯನ್ನೂ ಸಹ ಅದೇ ಪಾಸ್‌ವರ್ಡ್ ಬಳಸಿ ಪ್ರವೇಶಿಸಬಹುದೇ ಎಂಬುದನ್ನು ಅವರು ತ್ವರಿತವಾಗಿ ಕಂಡುಕೊಳ್ಳುತ್ತಾರೆ. ಇನ್ನೂ ಏನು ಮಾಡಬಹುದು, ನಾನು ಬಳಸುವ ಇತರ ಖಾತೆಗಳಿಗೆ ಹೊಸ ಪಾಸ್‌ವರ್ಡ್‌ಗಳನ್ನು ಅವರು ರಚಿಸಬಹುದು. ಪ್ರತಿ ಸೈಟ್‌ಗೆ ಸದೃಢ ಹಾಗೂ ಅನನ್ಯ ಪಾಸ್‌ವರ್ಡ್‌ಗಳನ್ನು ಸ್ವಯಂಚಾಲಿತವಾಗಿ ರಚಿಸುವ ಮೂಲಕ ಆನ್‌ಲೈನ್‌ನಲ್ಲಿ ನೀವು ಸುರಕ್ಷಿತವಾಗಿದ್ದೀರಿ ಎಂಬುದನ್ನು ಪಾಸ್‌ವರ್ಡ್ ನಿರ್ವಾಹಕವು ಖಚಿತಪಡಿಸುತ್ತದೆ.
“ಅಂತಾರಾಷ್ಟ್ರೀಯ ಉತ್ಪನ್ನಗಳೊಂದಿಗೆ ಕೆಲಸ ಮಾಡುವುದೆಂದರೆ ನಾವು ವಿವಿಧ ದೃಷ್ಟಿಕೋನಗಳನ್ನು ಹೊಂದಿರಬೇಕಾಗುತ್ತದೆ.”
ವೀಲ್ಯಾಂಡ್ ಹಾಲ್‌ಫೆಲ್ಡರ್, Google ನ ಎಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷರು ಹಾಗೂ ಸೈಟ್ ಲೀಡ್ ಆಗಿದ್ದಾರೆ
ಅದಕ್ಕಿಂತ ಸುರಕ್ಷಿತ ಕ್ರಮಗಳನ್ನು ಬಳಸಬಹುದೇ?
ಹೌದು, ನೀವು Google ಖಾತೆಯನ್ನು ಹೊಂದಿದ್ದರೆ ನೀವು ಎರಡು-ಅಂಶಗಳ ದೃಢೀಕರಣವನ್ನು ಸಹ ಬಳಸಬಹುದು. ಇದರ ಅರ್ಥ, ನೀವು ಪ್ರತಿ ಬಾರಿ ಹೊಸ ಸಾಧನದಲ್ಲಿ ಸೈನ್ ಇನ್ ಮಾಡಿದಾಗ, ನಾವು ನಿಮ್ಮ ಫೋನ್‌ಗೆ ಕಳುಹಿಸುವ ಕೋಡ್ ಅನ್ನು ನೀವು ಬಳಸಬೇಕಾಗುತ್ತದೆ. ಅದರಿಂದ, ವಿದೇಶದಲ್ಲಿರುವ ಯಾರಾದರೂ ನಿಮ್ಮ ಪಾಸ್‌ವರ್ಡ್ ಅನ್ನು ಹ್ಯಾಕ್ ಮಾಡಿದರೆ, ನಿಮ್ಮ ಖಾತೆಯನ್ನು ಪ್ರವೇಶಿಸಲು ಅವರಿಗೆ ಆಗಲೂ ಈ ಎರಡನೇ ಅಂಶದ ಅಗತ್ಯವಿರುತ್ತದೆ. ಉದಾಹರಣೆಗೆ, ವೈಯಕ್ತಿಕವಾಗಿ, ನನ್ನ ಖಾತೆಯಲ್ಲಿ ಆನ್‌ಲೈನ್‌ನಲ್ಲಿ ನನಗೆ ಸಂಬಂಧಿಸಿದ ಅತ್ಯಂತ ಅಮೂಲ್ಯವಾದ ಮಾಹಿತಿಯನ್ನು ನಾನು ಹೊಂದಿದ್ದೇನೆ, ಆ ಹೆಚ್ಚುವರಿ ಸುರಕ್ಷತೆಯಿಲ್ಲದೆ ನನಗೆ ನೆಮ್ಮದಿಯಿಂದ ಇರಲು ಸಾಧ್ಯವಾಗುವುದಿಲ್ಲ.
GSEC ನಲ್ಲಿ ಈ ರೀತಿಯ ಹೊಸ ಉತ್ಪನ್ನಗಳನ್ನು ನೀವು ಹೇಗೆ ಅಭಿವೃದ್ಧಿಪಡಿಸುತ್ತೀರಿ?
ಉದಾಹರಣೆಗೆ, ನಮ್ಮ "ಬಳಕೆದಾರರ ಅನುಭವದ ಸಂಶೋಧನಾ ಪ್ರಯೋಗಾಲಯಕ್ಕೆ" ಭೇಟಿ ನೀಡಲು ಅಥವಾ ಆನ್‌ಲೈನ್ ಸಂದರ್ಶನಗಳಲ್ಲಿ ಭಾಗವಹಿಸಲು ನಾವು ಜನರನ್ನು ಆಹ್ವಾನಿಸುತ್ತೇವೆ, ಅದರಿಂದ ಅವರು ಇಂಟರ್ನೆಟ್ ಅನ್ನು ಹೇಗೆ ಬಳಸುತ್ತಾರೆ ಅಥವಾ ವಿಷಯಗಳ ಕುರಿತು ಹೇಗೆ ಹುಡುಕಾಟ ನಡೆಸುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳಬಹುದು. ಅವರ ಗೌಪ್ಯತೆಯ ಆದ್ಯತೆಗಳ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಮಾನ್ಯವಾಗಿ ಅವರಿಗೆ ಯಾವ ಪರಿಕರಗಳು ಹಾಗೂ ಸಹಾಯದ ಅಗತ್ಯವಿದೆ ಎಂಬುದನ್ನು ತಿಳಿಯಲು ಇದು ನಮಗೆ ಸಹಾಯ ಮಾಡುತ್ತದೆ. "ಕುಟುಂಬದ ವಿವಿಧ ಸದಸ್ಯರ ಜೊತೆ ನೀವು Chrome ಬ್ರೌಸರ್ ಅನ್ನು ಹೇಗೆ ಬಳಸುತ್ತೀರಿ ಎಂದು ತಿಳಿಸುವಿರಾ"? ಈ ರೀತಿಯ ಪ್ರಶ್ನೆಗಳನ್ನು ನಾವು ಜನರಿಗೆ ಕೇಳುತ್ತೇವೆ ಹಾಗೂ ನಮ್ಮ ಉತ್ಪನ್ನಗಳನ್ನು ಬಳಸಲು ಅವರಿಗೆ ಹೇಳುತ್ತೇವೆ ಅದರಿಂದ ಅವುಗಳಿಗೆ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನಾವು ಅವಲೋಕಿಸಬಹುದು. ಈ ಒಳನೋಟಗಳು ಬಹಳ ಮುಖ್ಯವಾಗಿದೆ ಏಕೆಂದರೆ ನಮ್ಮ ಮಾಹಿತಿಯು ಸರಿಯಾದ ಸ್ಥಳದಲ್ಲಿವೆಯೇ ಅಥವಾ ಇಂಟರ್‌ಫೇಸ್ ಹಾಗೂ ಬಟನ್‌ಗಳು ಉಪಯುಕ್ತವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳಲು ಅವುಗಳು ನಮಗೆ ಸಹಾಯ ಮಾಡುತ್ತವೆ. ನಮ್ಮ ಉತ್ಪನ್ನಗಳು ನಮ್ಮ ಬಳಕೆದಾರರ ಅಗತ್ಯತೆಗಳಿಗೆ ಹೊಂದಾಣಿಕೆಯಾಗುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದು ನಮಗೆ ಅನುವು ಮಾಡಿಕೊಡುತ್ತವೆ. ವೆಬ್‌ನಲ್ಲಿ ನೀವು ಸುರಕ್ಷಿತವಾಗಿದ್ದೀರಿ ಎಂಬ ಭಾವನೆಯನ್ನು ಹೊಂದಲು ನೀವು ಭದ್ರತಾ ತಜ್ಞರಾಗಿರಬೇಕಿಲ್ಲ ಎಂಬುದೇ ನಮ್ಮ ಸಿದ್ಧಾಂತವಾಗಿದೆ.
ಇತರ ವಿಷಯಗಳ ನಡುವೆ, ಥರ್ಡ್-ಪಾರ್ಟಿ ಕುಕೀಗಳನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಪ್ರಸ್ತುತ ನೀವು ಕೆಲಸ ಮಾಡುತ್ತಿದ್ದೀರಿ. ಕುಕೀಗಳು ಎಂದರೇನು?
ಇಂಟರ್ನೆಟ್ ಪ್ರಾರಂಭವಾದಾಗಿನಿಂದಲೂ ಕುಕೀಗಳು ಇವೆ. ಅವು ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ಸ್ಥಳೀಯವಾಗಿ ಸಂಗ್ರಹಿಸಲು ವೆಬ್‌ಸೈಟ್ ಪೂರೈಕೆದಾರರು ಬಳಸುವ ಚಿಕ್ಕ ಗಾತ್ರದ ಫೈಲ್‌ಗಳಾಗಿವೆ. ಇಂಟರ್ನೆಟ್‌ನಲ್ಲಿ ಕುಕೀಗಳು ಈಗಲೂ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಉದಾಹರಣೆಗೆ, ಆನ್‌ಲೈನ್ ಖಾತೆಯಲ್ಲಿ ನಿಮ್ಮನ್ನು ಲಾಗ್ ಇನ್ ಆಗಿರಲು ಅಥವಾ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಶಾಪಿಂಗ್ ಕಾರ್ಟ್‌ಗಳನ್ನು ನಿರ್ವಹಿಸಲು ಫಸ್ಟ್-ಪಾರ್ಟಿ ಕುಕೀಗಳನ್ನು ಬಳಸಲಾಗುತ್ತದೆ. ಸೂಕ್ತವಾದ ಜಾಹೀರಾತನ್ನು ಪ್ರದರ್ಶಿಸಲು ಅನುಮತಿಸುವ ಥರ್ಡ್ ಪಾರ್ಟಿ ಕುಕೀಗಳು ಸಹ ಇರುತ್ತವೆ. ಒಂದು ನಿರ್ದಿಷ್ಟ ಉತ್ಪನ್ನದ ಕುರಿತು ನೀವು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ್ದೀರಿ ಎಂಬುದನ್ನೂ ಸಹ ಥರ್ಡ್ ಪಾರ್ಟಿ ಕುಕೀಗಳು ರೆಕಾರ್ಡ್ ಮಾಡುತ್ತವೆ. ಹಾಗಾಗಿ, ನೀವು ಒಂದು ಸೈಟ್‌ನಲ್ಲಿ ಬ್ಯಾಗ್ ಕುರಿತು ಹುಡುಕಾಟ ನಡೆಸುತ್ತಿದ್ದೀರಿ ಎಂಬುದನ್ನು ಕುಕಿ ದಾಖಲಿಸಿಕೊಳ್ಳುತ್ತದೆ ಹಾಗೂ ಬೇರೊಂದು ಸೈಟ್‌ನಲ್ಲಿರುವ ಅದೇ ರೀತಿಯ ಬ್ಯಾಗ್ ಕುರಿತ ಜಾಹೀರಾತನ್ನು ನಿಮಗೆ ತೋರಿಸುತ್ತದೆ.
ಏಕೆ ಹಾಗೆ ಮಾಡುತ್ತದೆ?
ಇಂಟರ್ನೆಟ್ ಎಂಬುದು ಮುಕ್ತ ಹಾಗೂ ಬಹುತೇಕ ಉಚಿತ ಪ್ಲ್ಯಾಟ್‌ಫಾರ್ಮ್ ಆಗಿದೆ. ವೆಬ್‌ಸೈಟ್‌ನಲ್ಲಿರುವ ವಿಷಯಗಳಿಗೆ ಪ್ರಮುಖವಾಗಿ ಜಾಹೀರಾತುಗಳಿಂದ ಹಣವನ್ನು ಒದಗಿಸಲಾಗುತ್ತದೆ ಹಾಗೂ ಜಾಹೀರಾತು ಎಷ್ಟು ಸೂಕ್ತವಾಗಿರುತ್ತದೆಯೋ ಅಷ್ಟು ಬಳಕೆದಾರರು ಹಾಗೂ ಪೂರೈಕೆದಾರರಿಗೆ ಉಪಯೋಗವಾಗುತ್ತದೆ.
ಆನ್‌ಲೈನ್‌ನಲ್ಲಿ ಬಳಕೆದಾರರ ಚಲನವಲನಗಳನ್ನು ಟ್ರ್ಯಾಕ್ ಮಾಡಲು ಥರ್ಡ್ ಪಾರ್ಟಿ ಕುಕೀಗಳು ಅನುವು ಮಾಡಿಕೊಡುತ್ತವೆ. ಭವಿಷ್ಯದಲ್ಲಿ ಇದನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ನೀವು ಪ್ರಸ್ತುತ ಕೆಲಸ ಮಾಡುತ್ತಿದ್ದೀರಿ. ಅದು ನಿಜವೇ?
ಹೌದು, ನಾವು ಪ್ರಸ್ತುತ "ಪ್ರೈವೆಸಿ ಸ್ಯಾಂಡ್‌ಬಾಕ್ಸ್" ಅನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಅದರಿಂದ ಭವಿಷ್ಯದಲ್ಲಿ ಜಾಹೀರಾತುದಾರರಿಗೆ ನನ್ನ ಕುಕೀಗಳ ಮೂಲಕ ನನ್ನನ್ನು ಗುರುತಿಸಲು ಇನ್ನು ಮುಂದೆ ಸಾಧ್ಯವಾಗುವುದಿಲ್ಲ. ಥರ್ಡ್ ಪಾರ್ಟಿ ಕುಕೀಗಳು ಬಳಕೆದಾರರ ನಿರೀಕ್ಷೆಗಳಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂಬುದು ವೆಬ್ ಸಮುದಾಯದಾದ್ಯಂತ ಇರುವ ಜನರ ಒಟ್ಟಾರೆ ಅಭಿಪ್ರಾಯವಾಗಿದೆ. ಪಾರದರ್ಶಕತೆ, ತಮ್ಮ ಡೇಟಾವನ್ನು ಹೇಗೆ ಬಳಸಬೇಕು ಎಂಬುದರ ಕುರಿತಾದ ಆಯ್ಕೆ ಹಾಗೂ ನಿಯಂತ್ರಣ ಸೇರಿದಂತೆ ಅತ್ಯುನ್ನತ ಸುರಕ್ಷತೆಗಾಗಿ ಬಳಕೆದಾರರು ಒತ್ತಾಯಿಸುತ್ತಿದ್ದಾರೆ ಹಾಗೂ ಅವರ ಈ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ವೆಬ್ ವ್ಯವಸ್ಥೆಯು ಅಭಿವೃದ್ಧಿ ಹೊಂದಬೇಕು ಎಂಬುದು ಈಗ ಸ್ಪಷ್ಟವಾಗಿದೆ. ಕ್ರಾಸ್-ಸೈಟ್ ಟ್ರ್ಯಾಕಿಂಗ್ ಅನ್ನು ಅಂತ್ಯಗೊಳಿಸುವುದಕ್ಕಾಗಿ, ಥರ್ಡ್ ಪಾರ್ಟಿ ಕುಕೀಗಳು ಹಾಗೂ ಇತರ ಬ್ರೌಸರ್ ಫಿಂಗರ್‌ಪ್ರಿಂಟಿಂಗ್‌ನಂತಹ ರಹಸ್ಯ ತಂತ್ರಗಳಿಂದ ವೆಬ್ ಹೊರಗುಳಿಯಬೇಕಾದ ಅಗತ್ಯವಿದೆ. ಆದರೆ 30 ವರ್ಷಗಳಿಗಿಂತ ಹೆಚ್ಚಿನ ಸಮಯದಿಂದ, ವೆಬ್‌ಗೆ ಸಂಬಂಧಿಸಿದ ಹಲವು ಅತಿ ಮುಖ್ಯ ಸಾಮರ್ಥ್ಯಗಳೂ ಸಹ ಈ ತಂತ್ರಗಳ ಮೇಲೆಯೇ ಅವಲಂಬಿತವಾಗಿವೆ. ಪ್ರಕಾಶಕರು ತಮ್ಮ ವ್ಯಾಪಾರವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಲು ಅನುವು ಮಾಡಿಕೊಡುವುದು ಹಾಗೂ ವೆಬ್ ಅನ್ನು ಸುಸ್ಥಿರವಾಗಿಸಲು, ಜನರಿಗೆ ತಮ್ಮ ವೈಯಕ್ತಿಕ ಸಾಧನಗಳಲ್ಲಿ ಉತ್ತಮ ವೆಬ್ ಅನುಭವಗಳನ್ನು ನೀಡುವ ಮೂಲಕ ಬಳಕೆದಾರರಿಗೆ ಎಲ್ಲಾ ವಿಷಯಗಳಿಗೆ ಮುಕ್ತ ಪ್ರವೇಶ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು, ಬಾಟ್‌ಗಳು, ವಂಚಕರು ಹಾಗೂ ಇತರರಿಂದ ನಿಜವಾದ ಬಳಕೆದಾರರನ್ನು ಬೇರ್ಪಡಿಸುವುದಕ್ಕಾಗಿ ಅಗತ್ಯವಿರುವ ನಿರ್ಣಾಯಕ ಸಾಮರ್ಥ್ಯಗಳನ್ನು ಕಳೆದುಕೊಳ್ಳಲು ನಾವು ಬಯಸುವುದಿಲ್ಲ. ಬಳಕೆದಾರರಿಗೆ ವೆಬ್ ಅನ್ನು ಇನ್ನಷ್ಟು ಖಾಸಗಿಯಾಗಿ ಮತ್ತು ಸುರಕ್ಷಿತವಾಗಿಸುವುದರ ಜೊತೆಗೆ ಪ್ರಕಾಶಕರಿಗೆ ಬೆಂಬಲ ನೀಡುವುದು ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಓಪನ್ ಸೋರ್ಸ್ ಉಪಕ್ರಮದ ನಮ್ಮ ಗುರಿಯಾಗಿದೆ.
ಈ ಸಮಸ್ಯೆಯನ್ನು Google ಹೇಗೆ ಪರಿಹರಿಸುತ್ತದೆ?
ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಉಪಕ್ರಮದ ಭಾಗವಾಗಿ,ಉಪಯುಕ್ತ ಜಾಹೀರಾತುಗಳನ್ನು ನೀಡಲು ಹಾಗೂ ಸೈಟ್‌ಗಳ ವ್ಯಾಪಾರಗಳಿಗೆ ಹಣವನ್ನು ಒದಗಿಸಲು ಅವುಗಳಿಗೆ ಅನುವು ಮಾಡಿಕೊಡುವುದರ ಜೊತೆಗೆ ಬಳಕೆದಾರರ ಮಾಹಿತಿಯನ್ನು ಖಾಸಗಿಯಾಗಿರಿಸುವ ಹಾಗೂ ಫಿಂಗರ್‌ಪ್ರಿಂಟಿಂಗ್‌ನಂತಹ ಆಕ್ರಮಣಕಾರಿ ಟ್ರ್ಯಾಕಿಂಗ್ ತಂತ್ರಗಳನ್ನು ತಡೆಗಟ್ಟುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವೆಬ್ ಸಮುದಾಯದ ಜೊತೆ ನಾವು ಕೆಲಸ ಮಾಡುತ್ತಿದ್ದೇವೆ. ಈ ವರ್ಷದ ಆರಂಭದಲ್ಲಿ, ಪ್ರತಿಕ್ರಿಯೆ ನಿಯಂತ್ರಕರು, ಗೌಪ್ಯತೆ ಸಂಬಂಧಿತ ವಕೀಲರು ಮತ್ತು ಡೆವಲಪರ್‌ಗಳ ಅಭಿಪ್ರಾಯದ ಆಧಾರದ ಮೇಲೆ, FloC ಅನ್ನು ಬದಲಿಸುವ ಆಸಕ್ತಿ-ಆಧಾರಿತ ಜಾಹೀರಾತಿಗೆ ಸಂಬಂಧಿಸಿದ ಹೊಸ ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಕುರಿತ ಪ್ರಸ್ತಾಪವಾದ Topics API ಅನ್ನು ನಾವು ಪೂರ್ವವೀಕ್ಷಿಸಿದ್ದೇವೆ. ಜನರು ಭೇಟಿ ನೀಡಿದ ವೆಬ್‌ಸೈಟ್‌ಗಳ ಆಧಾರದ ಮೇಲೆ ಅವರಿಗೆ ಸೂಕ್ತವಾದ ಜಾಹೀರಾತುಗಳನ್ನು ತೋರಿಸಲು ಜಾಹೀರಾತುದಾರರಿಗೆ ಅನುಮತಿಸುತ್ತದೆ, ಉದಾಹರಣೆಗೆ, ಅವರು ಭೇಟಿ ನೀಡಿದ ವೆಬ್‌ಸೈಟ್‌ಗಳಿಂದ ಊಹಿಸಿ "ಕ್ರೀಡೆಗಳಿಗೆ" ಸಂಬಂಧಿಸಿದ ಜಾಹೀರಾತುಗಳನ್ನು ತೋರಿಸಲಾಗುತ್ತದೆ, ಇವೆಲ್ಲವನ್ನೂ ಬಳಕೆದಾರರಿಗಾಗಿ ಅತ್ಯಂತ ಗೌಪ್ಯತೆ-ಸುರಕ್ಷಿತ ರೀತಿಯಲ್ಲಿ ಮಾಡಲಾಗುತ್ತದೆ. ಈ ಹಿಂದೆ ಬಳಕೆದಾರರನ್ನು ಗುರುತಿಸಲು ಕುಕೀಗಳನ್ನು ಬಳಸಲಾಗುತ್ತಿತ್ತು ಆದರೆ ಆ ವಿಷಯದ ಉದ್ದೇಶ ಏನೆಂದರೆ ನಿಮ್ಮ ಸಾಧನ ಅಥವಾ ಬ್ರೌಸರ್‌ನಿಂದ ನಿಮ್ಮ ವೈಯಕ್ತಿಕ ಬ್ರೌಸಿಂಗ್ ಇತಿಹಾಸವನ್ನು ನೀವು ಕಳೆದುಕೊಳ್ಳಬಾರದು ಹಾಗೂ ಜಾಹೀರಾತುದಾರರು ಸೇರಿದಂತೆ ಅದನ್ನು ಯಾರ ಜೊತೆಗೂ ಹಂಚಿಕೊಳ್ಳಬಾರದು ಎಂಬುದಾಗಿತ್ತು. ಇದರ ಅರ್ಥ ವೆಬ್‌ನಾದ್ಯಂತದ ನಿಮ್ಮ ಚಲನವಲನಗಳನ್ನು ಟ್ರ್ಯಾಕ್ ಮಾಡುವ ಅಗತ್ಯವಿಲ್ಲದೇ, ಜಾಹೀರಾತುದಾರರು ನಿಮಗೆ ಸೂಕ್ತವೆನಿಸುವ ಜಾಹೀರಾತುಗಳು ಹಾಗೂ ವಿಷಯವನ್ನು ನಿಮಗೆ ತೋರಿಸುವುದನ್ನು ಮುಂದುವರಿಸಬಹುದು.
FLEDGE ಮತ್ತು ಮೆಷರ್‌ಮೆಂಟ್ API ಗಳು ಸೇರಿದಂತೆ ಪ್ರೈವೆಸಿ ಸ್ಯಾಂಡ್‌ಬಾಕ್ಸ್‌ನ ಇತರ ಪ್ರಸ್ತಾವನೆಗಳ ಕುರಿತು ನಾವು ಉತ್ತಮ ಪ್ರಗತಿಯನ್ನೂ ಸಹ ಸಾಧಿಸುತ್ತಿದ್ದೇವೆ ಹಾಗೂ ಇಡೀ ಪರಿಸರ ವ್ಯವಸ್ಥೆಗೆ ಅನುಗುಣವಾಗಿ ಕೆಲಸ ಮಾಡುವ ರೀತಿಯಲ್ಲಿ ನಮ್ಮ ಪ್ರಸ್ತಾವನೆಗಳನ್ನು ಅಭಿವೃದ್ದಿಪಡಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ U.K. ನ ಸ್ಪರ್ಧೆ ಮತ್ತು ಮಾರುಕಟ್ಟೆಗಳ ಪ್ರಾಧಿಕಾರದೊಂದಿಗೆ (CMA) ಸಹಯೋಗವನ್ನು ಮುಂದುವರಿಸುತ್ತಿದ್ದೇವೆ.
ಇತ್ತೀಚಿನ ವರ್ಷಗಳಲ್ಲಿ, ಡಿಜಿಟಲ್ ಸ್ಟಾರ್ಟ್‌ಅಪ್‌ಗಳು ಹಾಗೂ ಇತರ ಟೆಕ್ ಕಂಪನಿಗಳಿಗಾಗಿ ಮ್ಯೂನಿಚ್ ಜನಪ್ರಿಯ ಸ್ಥಳವಾಗಿದೆ. Google ಮ್ಯೂನಿಚ್‌ನ ಸೈಟ್ ಲೀಡ್ ಆಗಿ ಇದರ ಕುರಿತ ನಿಮ್ಮ ಅನುಭವವೇನು?
ಮ್ಯೂನಿಚ್‌ನಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತಿವೆ. ಡೇಟಾ ವಿಶ್ಲೇಷಣೆಗಳ ಸೇವೆಗಳನ್ನು ಒದಗಿಸುವ ಯುನಿಕಾರ್ನ್ ಕಂಪನಿಯಾದ Celonis ನಂತಹ ಇತರ ಅದ್ಭುತ ಕಂಪನಿಗಳಂತೆ Apple, Amazon ಹಾಗೂ Google ಈ ಎಲ್ಲಾ ಕಂಪನಿಗಳು ಇಲ್ಲಿಯೂ ಸಹ ಹೂಡಿಕೆ ಮಾಡುತ್ತಿವೆ ಹಾಗೂ ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸುತ್ತಿವೆ. ಹಲವಾರು ಇತರ ಪ್ರಬಲ ಟೆಕ್ ವ್ಯಾಪಾರಗಳು ಈ ಪ್ರದೇಶದಲ್ಲಿರುವ ಕಾರಣ, ಬೇರೆಡೆಗಿಂತ ಹೆಚ್ಚಿನ ಪ್ರಮಾಣದಲ್ಲಿ B2B ಕಂಪನಿಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಸ್ಥಳೀಯ ಉದ್ಯಮಶೀಲತೆ ಕೇಂದ್ರಗಳನ್ನು ನಿರ್ವಹಿಸುವ LMU ಹಾಗೂ TUM ನಂತಹ ಕೆಲವು ಅತ್ಯುತ್ತಮ ವಿಶ್ವವಿದ್ಯಾಲಯಗಳನ್ನೂ ಸಹ ನಾವು ಹೊಂದಿದ್ದೇವೆ. ಅದರ ಜೊತೆಗೆ, ಬವೇರಿಯನ್ ರಾಜ್ಯ ಸರ್ಕಾರವು “ಹೈ-ಟೆಕ್ ಅಜೆಂಡಾ” ಆ್ಯಕ್ಷನ್ ಪ್ಲಾನ್ ಮೂಲಕ ಅಸಾಮಾನ್ಯ ಬೆಂಬಲವನ್ನು ಒದಗಿಸುತ್ತಿದೆ. ಉದಾಹರಣೆಗೆ, ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ರಂಗಗಳಲ್ಲಿ ದೊಡ್ಡ ಮಟ್ಟದ ಬಂಡವಾಳಗಳು ಹರಿದು ಬರುತ್ತಿವೆ – ಇದು ಬಹಳ ಒಳ್ಳೆಯ ಸಂಗತಿಯಾಗಿದೆ. ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ದೀರ್ಘಕಾಲದ ಪ್ರಾದೇಶಿಕ ಸಂಪ್ರದಾಯ ಮತ್ತು ಪರಿಣತಿಯ ಜೊತೆಗೆ, ಅದರ ಪ್ರಬಲ ಆರ್ಥಿಕ ಸುಸ್ಥಿರತೆ, ಉತ್ತಮ ರಾಜಕೀಯ ಬೆಂಬಲ, ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳು ಹಾಗೂ ಉನ್ನತ ಗುಣಮಟ್ಟದ ಜೀವನಶೈಲಿ ಇವೆಲ್ಲವುಗಳ ಅದ್ಭುತ ಸಂಯೋಜನೆಯೊಂದಿಗೆ ಈ ರಂಗದಲ್ಲಿನ ಯಶಸ್ಸಿಗೆ ಮ್ಯೂನಿಚ್ ಒಂದು ಅದ್ಭುತ ಸ್ಥಳವಾಗಿದೆ.
ಮ್ಯೂನಿಚ್‌ನಲ್ಲಿನ ಹೊಸ Google ಕಚೇರಿಗಳ ನಿರ್ಮಾಣ ಕಾಮಗಾರಿಯು ಪ್ರಸ್ತುತ ಪ್ರಗತಿಯಲ್ಲಿದೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಕಾರಣ ನಿಮ್ಮ ಯೋಜನೆಗಳು ಬದಲಾದವೇ?
ಸಾಂಕ್ರಾಮಿಕ ರೋಗದ ಪರಿಸ್ಥಿತಿಗಿಂತ ಮುಂಚೆ, ನಮ್ಮ ಬಹುಪಾಲು ಸಮಯವನ್ನು ನಾವು ಕಚೇರಿಗಳಲ್ಲಿ ಕಳೆಯುತ್ತಿದ್ದೆವು, ಅಲ್ಲಿ ಉದ್ಯೋಗಿಗಳು ವ್ಯಕ್ತಿಗತವಾಗಿ ಭೇಟಿ ಮಾಡಲು ಹಾಗೂ ಒಟ್ಟಿಗೆ ಕೂಡಿ ಆವಿಷ್ಕಾರ ಮಾಡಲು ಹಲವು ಕೆಫೆಗಳು, ಮೀಟಿಂಗ್ ರೂಮ್‌ಗಳು ಹಾಗೂ ರೆಸ್ಟೋರೆಂಟ್‍ಗಳು ಇದ್ದವು. ಸಾಂಕ್ರಾಮಿಕ ರೋಗದ ಪರಿಸ್ಥಿತಿಯಲ್ಲಿ ನಿಸ್ಸಂಶಯವಾಗಿ ಕೆಲಸ ಮಾಡುವ ಈ ರೀತಿಯು ಗಣನೀಯವಾಗಿ ಬದಲಾಗಿದೆ ಹಾಗೂ ಕಳೆದ ವರ್ಷದ ಪರಿಸ್ಥಿತಿಯಿಂದ ನಾವು ಕಲಿತ ಹಲವು ವಿಷಯಗಳನ್ನು ನಮ್ಮ ಮುಂದಿನ ಹೊಸ ಹಾಗೂ ರೋಚಕ Arnulfpost ಪ್ರಾಜೆಕ್ಟ್‌ನ ಯೋಜನೆಯಲ್ಲಿ ನಾವು ಈಗ ಅಳವಡಿಸಿಕೊಳ್ಳುತ್ತಿದ್ದೇವೆ.
ಅದೇ ವಾತಾವರಣವನ್ನು ರಿಮೋಟ್ ಆಗಿ ಕೆಲಸ ಮಾಡುವಲ್ಲಿಯೂ ಸೃಷ್ಟಿಸಲು ಸಾಧ್ಯವೇ?
ನಮ್ಮ ಸಂಸ್ಥೆಯು ಕ್ಲೌಡ್ ತಂತ್ರಜ್ಞಾನದ ಆಧಾರದ ಮೇಲೆ ಸ್ಥಾಪಿತವಾಗಿದೆ, ಅದೇ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿದೆ ಹಾಗೂ ನಮ್ಮೆಲ್ಲಾ ಕೆಲಸಗಳು ಅದರ ಮೇಲೆ ಆಧಾರವಾಗಿವೆ. ಹಾಗಾಗಿ, ಉಪಾಹಾರದ ಮೀಟಿಂಗ್‌ಗಳು ಅಥವಾ ಮುಕ್ತ ವೀಡಿಯೊ ಕಾನ್ಫರೆನ್ಸ್‌ಗಳಲ್ಲಿ ಆನ್‌ಲೈನ್ ಮೂಲಕ ಸಂವಹನ ನಡೆಸಲು ನಮ್ಮ ಸಿಬ್ಬಂದಿಗೆ ನಾವು ಪ್ರೋತ್ಸಾಹಿಸುತ್ತೇವೆ. ಹಾಗಿದ್ದರೂ, ನಾವು ಸಾಕಷ್ಟು ವರ್ಷಗಳಿಂದ ಬೆಳೆಸಿಕೊಂಡು ಬಂದ ಮಾನವ ಸಂಬಂಧಗಳ ಆಧಾರದ ಮೇಲೆ ಶಾಶ್ವತವಾಗಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ನಾವು ನಂಬಿದ್ದೇವೆ. ನಮ್ಮ ಕಚೇರಿಗಳಿಗೆ ಇನ್ನೂ ಭೇಟಿ ನೀಡದ ಹಲವು ಜನರನ್ನು ನಾವು ನೇಮಕ ಮಾಡಿಕೊಂಡಿದ್ದೇವೆ. ಪ್ರತಿಯೊಬ್ಬ ಉದ್ಯೋಗಿಯ ಕೆಲಸದ ನಿರ್ವಹಣೆಯನ್ನು ಮಾಡುವುದು ಎಲ್ಲಾ ನಿರ್ವಾಹಕರಿಗೆ ಸವಾಲಿನ ಕೆಲಸವಾಗಿದೆ.
ಭವಿಷ್ಯದಲ್ಲಿ, ನಿರ್ದಿಷ್ಟವಾಗಿ ಮ್ಯೂನಿಚ್‌ನಲ್ಲಿನ GSEC ಯಲ್ಲಿ ಕೆಲಸ ಮಾಡುವ ರೀತಿಯ ಮೇಲೆ ಇದು ಹೇಗೆ ಪ್ರಭಾವ ಬೀರುತ್ತದೆ?
ಹೊಸ ಹಾಗೂ ವಿನೂತನ ಆಲೋಚನೆಗಳನ್ನು ಸಾಕಾರಗೊಳಿಸಲು ಅಗತ್ಯವಿರುವ ವಿಶೇಷ ವಾತಾವರಣವನ್ನು ಸೃಷ್ಟಿಸುವುದಕ್ಕಾಗಿ, ಕೆಲಸದ ಸ್ಥಳದಲ್ಲಿ ಎಲ್ಲಾ ಜನರನ್ನು ಒಟ್ಟುಗೂಡಿಸುವುದರ ಪ್ರಾಮುಖ್ಯತೆಯಲ್ಲಿ ನಾವು ದೃಢ ವಿಶ್ವಾಸವನ್ನು ಇಟ್ಟಿದ್ದೇವೆ, ಹಾಗಾಗಿ ಶೇಕಡಾ 100 ರಷ್ಟು ವರ್ಚುವಲ್ ಆಗಿ ನಾವು ಕೆಲಸಮಾಡುವುದಿಲ್ಲ. ಆದರೆ, ಎಲ್ಲರೂ ಸ್ಥಿರ ಕೆಲಸದ ಸ್ಥಳವನ್ನು ಹೊಂದಿರುವ ಅಗತ್ಯವಿದೆಯೇ ಎಂಬುದರ ಕುರಿತು ನಾವು ಆಲೋಚಿಸಿದ್ದೇವೆ. ನಮ್ಮ ಮಾರಾಟದ ತಂಡಗಳು ಈಗಾಗಲೇ ಈ ಪರಿಸ್ಥಿತಿಗೆ ಹೊಂದಿಕೊಂಡು ಕೆಲಸ ಮಾಡುತ್ತಿವೆ. ನಮ್ಮ ಇಂಜಿನಿಯರ್‌ಗಳ ಹಲವಾರು ಡೆವಲಪ್‌ಮೆಂಟ್ ಪರಿಕರಗಳು ಕ್ಲೌಡ್ ತಂತ್ರಜ್ಞಾನಕ್ಕೆ ಬದಲಾಗುತ್ತಿವೆ. ಭವಿಷ್ಯದಲ್ಲಿ, ಪ್ರತಿಯೊಂದು ತಂಡವು ಅವರಿಗೆ ಎಷ್ಟು ಸ್ಥಿರ ಕೆಲಸದ ಸ್ಥಳಗಳು ಹಾಗೂ ಅನುಕೂಲಕರ ಕೆಲಸದ ಸ್ಥಳಗಳನ್ನು ಉಳಿಸಿಕೊಳ್ಳಲು ಬಯಸುತ್ತವೆ ಎಂಬುದನ್ನು ಸ್ವತಃ ನಿರ್ಧರಿಸಲು ಸಾಧ್ಯವಾಗುತ್ತದೆ. ಎಲ್ಲಾ ಮಾದರಿಗಳಿಗೆ ವೇಗವಾಗಿ ಹೊಂದಿಕೊಳ್ಳಬಹುದಾದ ಡೆಸ್ಕ್ ಹಂಚಿಕೆ ಪರಿಕರಗಳು ಮತ್ತು ತಂಡಗಳು ಇನ್ನಷ್ಟು ಡೈನಾಮಿಕ್ ಸೆಟಪ್‌ನಲ್ಲಿ ಒಟ್ಟಿಗೆ ಹಾಗೂ ವೈಯಕ್ತಿಕ ಕೆಲಸದ ಸ್ಥಳದ ಆದ್ಯತೆ ಮತ್ತು ವೇಳಾಪಟ್ಟಿಗಳ ಆಧಾರದಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡಬಲ್ಲ ಹೊಸ ಸಹಯೋಗದ ಸ್ಥಳಗಳನ್ನು ಒದಗಿಸುವ ಮೂಲಕ ಇಂದು ನಾವು ಕೆಲಸ ಮಾಡುವ ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿದ್ದೇವೆ.
ಫೋಟೋಗಳು: ಸೀಮಾ ದೆಹ್‌ಗಾನಿ
ಸೈಬರ್‌ಸೆಕ್ಯೂರಿಟಿ ಸುಧಾರಣೆಗಳು
ಜಗತ್ತಿನಲ್ಲಿರುವ ಇತರರಿಗಿಂತ ನಾವು ಹೆಚ್ಚು ಜನರನ್ನು ಆನ್‌ಲೈನ್‌ನಲ್ಲಿ ಹೇಗೆ ಸುರಕ್ಷಿತವಾಗಿರಿಸುತ್ತೇವೆ ಎಂದು ತಿಳಿಯಿರಿ.
ಇನ್ನಷ್ಟು ತಿಳಿಯಿರಿ