ಎರಡು ಪಟ್ಟು ಸುರಕ್ಷತೆ

ಎರಡು-ಅಂಶಗಳ ದೃಢೀಕರಣವು ಆನ್‌ಲೈನ್‌ನಲ್ಲಿ ತಮ್ಮನ್ನು ಉತ್ತಮವಾಗಿ ರಕ್ಷಿಸಿಕೊಳ್ಳಲು ಬಳಕೆದಾರರಿಗೆ ನೆರವಾಗಬಲ್ಲದು. Google ಖಾತೆ ಹಲವಾರು ಆಯ್ಕೆಗಳನ್ನು ಒದಗಿಸುತ್ತದೆ

ಒಂದು ಯಶಸ್ವಿ ಡೇಟಾ ಹ್ಯಾಕ್‌ನಿಂದ ಅಹಿತಕರ ಪರಿಣಾಮಗಳು ಉಂಟಾಗಬಹುದು. ಅಪರಿಚಿತ ದಾಳಿಕೋರರು ಸಂತ್ರಸ್ತರ ಖಾತೆಗಳನ್ನು ಬಳಸಿಕೊಂಡು ಅವರದೇ ಬಳಕೆದಾರರ ಹೆಸರಿನಲ್ಲಿ ಇತರರನ್ನು ಟ್ರೋಲ್ ಮಾಡಿರುವ ಅಥವಾ ವಂಚನೆಯ ಇಮೇಲ್‌ಗಳನ್ನು ಕಳುಹಿಸಿರುವ ಪ್ರಕರಣಗಳು ನಡೆದಿವೆ. ಇತರರು ತಮ್ಮ ಆನ್‌ಲೈನ್ ಬ್ಯಾಂಕ್ ಖಾತೆಗಳಿಂದ ಹಣ ಕಣ್ಮರೆಯಾಗಿರುವ ಪ್ರಕರಣಗಳನ್ನು ಅನುಭವಿಸಿದ್ದಾರೆ. ಅನೇಕ ಬಾರಿ, ಹಾನಿ ಉಂಟಾಗುವವರೆಗೂ ತಮ್ಮ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ವಿಚಾರ ಜನರ ಗಮನಕ್ಕೇ ಬಂದಿರುವುದಿಲ್ಲ.

ಅನೇಕ ಬಳಕೆದಾರರು ಆನ್‌ಲೈನ್ ಜಗತ್ತಿನಲ್ಲಿ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಪಾಸ್‌ವರ್ಡ್‌ಗಳನ್ನು ಅತಿಯಾಗಿ ಅವಲಂಬಿಸಿರುವುದು ಡೇಟಾ ಕಳ್ಳತನ ಪದೇ ಪದೇ ಸಂಭವಿಸುತ್ತಿರುವುದರ ಹಿಂದಿನ ಕಾರಣಗಳಲ್ಲೊಂದು. ಲಕ್ಷಾಂತರ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ಗಳ ಸಂಯೋಜನೆಗಳನ್ನು ಒಳಗೊಂಡಿರುವ ಆನ್‌ಲೈನ್ ಪಟ್ಟಿಗಳು ಅಸ್ತಿತ್ವದಲ್ಲಿವೆ ಎಂಬ ವಿಚಾರ ಜನರಿಗೆ ತಿಳಿದಿಲ್ಲ. ತಜ್ಞರು "ಪಾಸ್‌ವರ್ಡ್ ಡಂಪ್‌ಗಳು" ಎಂದೇ ಕರೆಯುವ ಈ ಪಟ್ಟಿಗಳನ್ನು ಹಲವಾರು ಯಶಸ್ವಿ ಡೇಟಾ ಕಳ್ಳತನದ ಸಂದರ್ಭಗಳಲ್ಲಿ ಪಡೆದುಕೊಂಡ ಡೇಟಾದಿಂದ ರಚಿಸಲಾಗಿರುತ್ತದೆ. ಹಲವಾರು ಜನರು ತಮ್ಮ ಪಾಸ್‌ವರ್ಡ್‌ಗಳನ್ನು ಅನೇಕ ಉದ್ದೇಶಗಳಿಗಾಗಿ ಬಳಸುವುದರಿಂದ, ಅವರ ಖಾತೆಗಳು ವಾಸ್ತವದಲ್ಲಿ ಹ್ಯಾಕ್ ಆಗಿಲ್ಲದಿದ್ದರೂ ಅವರ Google ಖಾತೆಗಳ ಲಾಗ್ ಇನ್ ಡೇಟಾ ಕೂಡ ಈ "ಪಾಸ್‌ವರ್ಡ್ ಡಂಪ್‌ಗಳಲ್ಲಿ" ಕಂಡುಬರುತ್ತದೆ. ಮತ್ತೊಂದು ಪ್ರಕಾರದ ನಿರಂತರ ಅಪಾಯವನ್ನು ಉಂಟುಮಾಡುವ ಪ್ರಕ್ರಿಯೆಯನ್ನು ಫಿಶಿಂಗ್ ಎನ್ನಲಾಗುತ್ತದೆ – ಪಾಸ್‌ವರ್ಡ್‌ಗಳು ಮತ್ತು ಇತರ ಮಾಹಿತಿಯನ್ನು ಪಡೆದುಕೊಳ್ಳಲು ವಿಶ್ವಾಸಾರ್ಹವೆನಿಸುವ ಇಮೇಲ್‌ಗಳು ಮತ್ತು ವೆಬ್‌ಸೈಟ್‌ಗಳ ಮೂಲಕ ನಡೆಸುವ ವಂಚನೆಯ ಪ್ರಯತ್ನಗಳು.

ಆದ್ದರಿಂದ Google ನಂತಹ ಕಂಪನಿಗಳು ತಮ್ಮ ಬಳಕೆದಾರರು ಅವರ ಆನ್‌ಲೈನ್ ಖಾತೆಯನ್ನು ಎರಡು-ಅಂಶಗಳ ದೃಢೀಕರಣದ ಮೂಲಕ ಸುರಕ್ಷಿತವಾಗಿಸುವುದನ್ನು ಶಿಫಾರಸು ಮಾಡುತ್ತವೆ, ಈ ಪ್ರಕ್ರಿಯೆಯ ಅಂಗವಾಗಿ ಲಾಗ್ ಇನ್ ಮಾಡಲು ಎರಡು ಪ್ರತ್ಯೇಕ ಹಂತಗಳನ್ನು ಪೂರ್ಣಗೊಳಿಸಬೇಕಾಗುತ್ತದೆ - ಉದಾಹರಣೆಗೆ ಪಾಸ್‌ವರ್ಡ್ ಮತ್ತು ಪಠ್ಯದ ಮೂಲಕ ಕಳುಹಿಸಲಾಗಿರುವ ಕೋಡ್ ಬಳಸಿ ಲಾಗ್ ಇನ್ ಆಗುವುದು. ಈ ದೃಢೀಕರಣ ವಿಧಾನ ವಿಶೇಷವಾಗಿ ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಕಂಪನಿಗಳ ವಿಚಾರದಲ್ಲಿ ಬಹಳ ಸಾಮಾನ್ಯವಾಗಿಬಿಟ್ಟಿದೆ.

ಭದ್ರತಾ ತಜ್ಞರು ಮೂರು ಮೂಲಭೂತ ಪ್ರಕಾರದ ಭದ್ರತಾ ಅಂಶಗಳನ್ನು ಗುರುತಿಸುತ್ತಾರೆ. ಮೊದಲನೆಯ ಅಂಶ ಮಾಹಿತಿಯ ತುಣುಕು ("ನಿಮಗೆ ತಿಳಿದಿರುವ ಸಂಗತಿ"): ಉದಾಹರಣೆಗೆ, ಒಬ್ಬ ಬಳಕೆದಾರರು ಪಠ್ಯದ ಮೂಲಕ ಒಂದು ಕೋಡ್ ಸ್ವೀಕರಿಸುತ್ತಾರೆ ಮತ್ತು ಅವರು ಅದನ್ನು ನಮೂದಿಸುತ್ತಾರೆ ಅಥವಾ ಅವರು ಭದ್ರತಾ ಪ್ರಶ್ನೆಯೊಂದಕ್ಕೆ ಉತ್ತರಿಸಬೇಕಾಗುತ್ತದೆ. ಎರಡನೆಯದು, ದೃಢೀಕರಣಕ್ಕಾಗಿ ಬಳಸಿಕೊಳ್ಳಬಹುದಾದ ಒಂದು ಭೌತಿಕವಾದ ವಸ್ತು ("ನಿಮ್ಮ ಬಳಿ ಇರುವ ವಸ್ತು"), ಉದಾಹರಣೆಗೆ ಕ್ರೆಡಿಟ್ ಕಾರ್ಡ್. ಮೂರನೆಯದು ಬಯೋಮೆಟ್ರಿಕ್ ಡೇಟಾ, ("ನಿಮ್ಮ ಅಸ್ತಿತ್ವದ ಭಾಗ") ಉದಾಹರಣೆಗೆ, ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಸ್ಕ್ರೀನ್ ಅನ್ನು ಅನ್‌ಲಾಕ್ ಮಾಡಲು ಬಳಸುವ ಫಿಂಗರ್‌ಪ್ರಿಂಟ್. ಎಲ್ಲಾ ಎರಡು-ಅಂಶಗಳ ದೃಢೀಕರಣ ಕಾರ್ಯತಂತ್ರಗಳು ಮೇಲಿನ ವಿಭಿನ್ನ ಅಂಶಗಳಲ್ಲಿ ಎರಡು ಅಂಶಗಳ ಸಂಯೋಜನೆಯನ್ನು ಉಪಯೋಗಿಸಿಕೊಳ್ಳುತ್ತವೆ.

Google ಅನೇಕ ಪ್ರಕಾರಗಳ ಎರಡು-ಅಂಶಗಳ ದೃಢೀಕರಣದ ಆಯ್ಕೆಗಳನ್ನು ಒದಗಿಸುತ್ತದೆ. ಸಾಂಪ್ರದಾಯಿಕ ಪಾಸ್‌ವರ್ಡ್‌ನ ಜೊತೆಗೆ, ಬಳಕೆದಾರರು ಒಂದು ಬಾರಿಯ ಭದ್ರತಾ ಕೋಡ್ ಅನ್ನು ನಮೂದಿಸಬಹುದು, ಈ ಕೋಡ್ ಅನ್ನು ಅವರು ಪಠ್ಯ ಅಥವಾ ಧ್ವನಿ ಕರೆಯ ಮೂಲಕ ಸ್ವೀಕರಿಸಬಹುದು ಅಥವಾ Android ನಲ್ಲಿ ಮತ್ತು Apple ನ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆದ iOS ನಲ್ಲಿ ಕಾರ್ಯನಿರ್ವಹಿಸುವ Google ಅಥೆಂಟಿಕೇಟರ್ ಆ್ಯಪ್‌ನಲ್ಲಿಯೂ ಪಡೆದುಕೊಳ್ಳಬಹುದು. ಬಳಕೆದಾರರು ತಮ್ಮ Google ಖಾತೆಯಲ್ಲಿ ವಿಶ್ವಾಸಾರ್ಹ ಸಾಧನಗಳ ಪಟ್ಟಿಯನ್ನು ಸಹ ಒದಗಿಸಬಹುದು. ಒಬ್ಬ ಬಳಕೆದಾರರು ಆ ಪಟ್ಟಿಯಲ್ಲಿ ಇಲ್ಲದಿರುವ ಸಾಧನದ ಮೂಲಕ ಲಾಗ್ ಇನ್ ಮಾಡಲು ಪ್ರಯತ್ನಿಸಿದರೆ, ಅವರಿಗೆ Google ನಿಂದ ಭದ್ರತಾ ಎಚ್ಚರಿಕೆ ದೊರೆಯುತ್ತದೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ Google ತನ್ನ ಬಳಕೆದಾರರಿಗೆ ಭದ್ರತೆ ಕೀ ಎಂದು ಕರೆಯಲ್ಪಡುವ ಭೌತಿಕ ಭದ್ರತಾ ಟೋಕನ್ ಅನ್ನು ಬಳಸುವ ಆಯ್ಕೆಯನ್ನು ಒದಗಿಸಿದೆ. ಇದು USB, NFC ಅಥವಾ ಬ್ಲೂಟೂತ್ ಡಾಂಗಲ್ ಆಗಿದ್ದು, ಅದನ್ನು ಬಳಕೆದಾರರ ಸಾಧನಕ್ಕೆ ಕನೆಕ್ಟ್ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯು, FIDO ಒಕ್ಕೂಟ ಅಭಿವೃದ್ಧಿಪಡಿಸಿರುವ ಯುನಿವರ್ಸಲ್ 2ನೇ ಫ್ಯಾಕ್ಟರ್ (U2F) ಎಂಬ ಹೆಸರಿನ ಮುಕ್ತ ದೃಢೀಕರಣ ಸ್ಟ್ಯಾಂಡರ್ಡ್ ಅನ್ನು ಆಧರಿಸಿದೆ. Microsoft, Mastercard ಮತ್ತು PayPal ನಂತಹ ಕಂಪನಿಗಳ ಜೊತೆಗೆ Google ಈ ಒಕ್ಕೂಟದ ಭಾಗವಾಗಿದೆ. U2F ಸ್ಟ್ಯಾಂಡರ್ಡ್ ಅನ್ನು ಆಧರಿಸಿರುವ ಭದ್ರತೆ ಟೋಕನ್‌ಗಳು ಹಲವಾರು ತಯಾರಕರ ಬಳಿ ಕಡಿಮೆ ಬೆಲೆಗೆ ದೊರೆಯುತ್ತವೆ. ಇವು ಅತ್ಯಂತ ಯಶಸ್ವಿಯಾಗಿವೆ – ಭದ್ರತೆ ಕೀಗಳನ್ನು ಪರಿಚಯಿಸಿದಾಗಿನಿಂದ, ಡೇಟಾ ಕಳ್ಳತನದ ಅಪಾಯ ಗಣನೀಯವಾಗಿ ಕಡಿಮೆಯಾಗಿದೆ. ಸೈದ್ಧಾಂತಿಕವಾಗಿ, ಆನ್‌ಲೈನ್ ಖಾತೆಯೊಂದನ್ನು ಜಗತ್ತಿನ ಯಾವುದೇ ಸ್ಥಳದಿಂದ ಬೇಕಾದರೂ ಹ್ಯಾಕ್ ಮಾಡಬಹುದು ಎಂಬುದು ನಿಜವಾದರೂ, ಹಾಗಾಗಬೇಕಿದ್ದರೆ ಭೌತಿಕ ಭದ್ರತಾ ಟೋಕನ್ ಕಳ್ಳರ ಕೈಯಲ್ಲಿರಬೇಕಾಗುತ್ತದೆ (ಖಾತೆಯನ್ನು ಪ್ರವೇಶಿಸಲು ಅವರಿಗೆ ಸಂತ್ರಸ್ತರ ಲಾಗ್ ಇನ್ ವಿವರಗಳೂ ಬೇಕಾಗುತ್ತವೆ). Google ಮಾತ್ರವಲ್ಲದೇ ಇನ್ನೂ ಅನೇಕ ಕಂಪನಿಗಳು ಈ ಭದ್ರತಾ ಟೋಕನ್‌ಗಳನ್ನು ಬೆಂಬಲಿಸುತ್ತವೆ.

ಎರಡು-ಅಂಶಗಳ ದೃಢೀಕರಣದಿಂದ ಅನಾನುಕೂಲಗಳೂ ಉಂಟಾಗುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಪಠ್ಯ ಕೋಡ್‌ಗಳನ್ನು ಬಳಸುವವರು ಹೊಸ ಸಾಧನದಿಂದ ಲಾಗ್ ಇನ್ ಮಾಡುವಾಗ ತಮ್ಮ ಸೆಲ್ ಫೋನ್ ಅನ್ನು ಹತ್ತಿರದಲ್ಲೇ ಇಟ್ಟುಕೊಂಡಿರಬೇಕಾಗುತ್ತದೆ. ಹಾಗೂ USB ಮತ್ತು ಬ್ಲೂಟೂತ್ ಡಾಂಗಲ್‌ಗಳು ಕಳೆದುಹೋಗಬಹುದು. ಆದರೆ ಇವು ಬಗೆಹರಿಸಲು ಸಾಧ್ಯವಾಗದ ಸಮಸ್ಯೆಗಳಲ್ಲ ಮತ್ತು ಆ ಸಾಧನಗಳು ಒದಗಿಸುವ ಹೆಚ್ಚುವರಿ ಭದ್ರತೆಯನ್ನು ಪರಿಗಣಿಸಿದರೆ, ಆ ಸಮಸ್ಯೆಗಳನ್ನು ಅನುಭವಿಸುವುದು ಪರವಾಗಿಲ್ಲವೆನಿಸುತ್ತದೆ. ಯಾರಾದರೂ ತಮ್ಮ ಭದ್ರತೆ ಕೀ ಕಳೆದುಕೊಂಡರೆ, ಅವರು ಕಳೆದುಹೋಗಿರುವ ಟೋಕನ್ ಅನ್ನು ತಮ್ಮ ಖಾತೆಯಿಂದ ತೆಗೆದುಹಾಕಬಹುದು ಮತ್ತು ಹೊಸ ಟೋಕನ್ ಸೇರಿಸಬಹುದು. ಭದ್ರತೆ ಕೀ ಅನ್ನು ಹೊಸದಾಗಿ ನೋಂದಾಯಿಸಿಕೊಂಡು, ಅದನ್ನು ಸುರಕ್ಷಿತ ಸ್ಥಳದಲ್ಲಿರಿಸುವುದು ಮತ್ತೊಂದು ಆಯ್ಕೆ.

ಹೆಚ್ಚಿನ ಮಾಹಿತಿಗಾಗಿ, ಇಲ್ಲಿಗೆ ಭೇಟಿ ನೀಡಿ:

g.co/2step

ಚಿತ್ರಣ: ಬಿರ್ಜಿಟ್ ಹೆನ್ನ್

ಸೈಬರ್‌ಸೆಕ್ಯೂರಿಟಿ ಸುಧಾರಣೆಗಳು

ಜಗತ್ತಿನಲ್ಲಿರುವ ಇತರರಿಗಿಂತ ನಾವು ಹೆಚ್ಚು ಜನರನ್ನು ಆನ್‌ಲೈನ್‌ನಲ್ಲಿ ಹೇಗೆ ಸುರಕ್ಷಿತವಾಗಿರಿಸುತ್ತೇವೆ ಎಂದು ತಿಳಿಯಿರಿ.

ಇನ್ನಷ್ಟು ತಿಳಿಯಿರಿ