ಡೇಟಾವನ್ನು ನಿಮ್ಮೊಂದಿಗೆ ಕೊಂಡೊಯ್ಯುವುದು ಹೇಗೆ

ವೈಯಕ್ತಿಕ ಡೇಟಾವನ್ನು ನಿಮ್ಮ ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡಿಕೊಳ್ಳಲು ಅಥವಾ ಬೇರೆ ಪೂರೈಕೆದಾರರಿಗೆ ವರ್ಗಾಯಿಸಲು ಬಯಸುತ್ತೀರಾ? Google Takeout ಬಳಸಿ ಇವೆರಡನ್ನೂ ಮಾಡಬಹುದು ಎಂಬುದಾಗಿ Google ನ ಸ್ಟೀಫನ್ ಮಿಕ್‌ಲಿಟ್ಜ್ ಹಾಗೂ ಗ್ರೆಗ್ ಫೇರ್ ವಿವರಿಸುತ್ತಾರೆ

ಮಿಸ್ಟರ್ ಮಿಕ್‌ಲಿಟ್ಜ್, ಮಿಸ್ಟರ್ ಫೇರ್, ನೀವು Google Takeout ನ ಜವಾಬ್ದಾರಿಯನ್ನು ಹೊಂದಿದ್ದೀರಿ. ಇದು ನಿಜವಾಗಿಯೂ ಯಾವುದಕ್ಕಾಗಿ ಬಳಕೆಯಾಗುತ್ತದೆ?

ಸ್ಟೀಫನ್ ಮಿಕ್‌ಲಿಟ್ಜ್, Google ನ ಗೌಪ್ಯತೆ ಹಾಗೂ ಸುರಕ್ಷತೆ ತಂಡದಲ್ಲಿ ಡೈರೆಕ್ಟರ್ ಆಫ್ ಇಂಜಿನಿಯರಿಂಗ್: Google Takeout ಉದಾಹರಣೆಗೆ, Google Drive ನಲ್ಲಿ ಸಂಗ್ರಹಣೆ ಮಾಡಲಾಗಿರುವ ನಿಮ್ಮ ಫೋಟೋಗಳು, ಕಾಂಟ್ಯಾಕ್ಟ್‌ಗಳು, ಇಮೇಲ್‌ಗಳು, ಕ್ಯಾಲೆಂಡರ್ ನಮೂದುಗಳು ಅಥವಾ ಮ್ಯೂಸಿಕ್ ಫೈಲ್‌ಗಳನ್ನು ನಿಮ್ಮ ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡಿಕೊಳ್ಳಲು ಅಥವಾ ಬೇರೆ ಪೂರೈಕೆದಾರರಿಗೆ ವರ್ಗಾಯಿಸಲು ನಿಮಗೆ ಅವಕಾಶ ನೀಡುತ್ತದೆ.

ಗ್ರೆಗ್ ಫೇರ್, Google Takeout ನಲ್ಲಿ ಪ್ರಾಡಕ್ಟ್ ಮ್ಯಾನೇಜರ್: ನಮಗೆ ಇಬ್ಬರು ಮಕ್ಕಳಿದ್ದಾರೆ, ಮತ್ತು ಹೆಚ್ಚಿನ ತಂದೆ-ತಾಯಿಯ ಹಾಗೆ ನಮ್ಮ ಬಳಿಯೂ ಅವರ ಸಾವಿರಾರು ಫೋಟೋಗಳಿವೆ – ನಿಖರವಾಗಿ ಹೇಳಬೇಕೆಂದರೆ 600 ಗಿಗಾಬೈಟ್‌ಗಳಷ್ಟು ಫೋಟೋಗಳು. ಈ ಎಲ್ಲಾ ಫೋಟೋಗಳನ್ನು ಹೊಂದಿರುವ ನನ್ನ ಹಾರ್ಡ್ ಡ್ರೈವ್ ಕ್ರ್ಯಾಶ್ ಆದಾಗ, ನಾನು ಅವುಗಳನ್ನೆಲ್ಲ Google Photos ನಲ್ಲಿಯೂ ಉಳಿಸಿದ್ದರಿಂದ, ನನ್ನ ನೆಮ್ಮದಿ ಕೆಡಲಿಲ್ಲ. ನಂತರ ನಾನು Google Takeout ಬಳಸಿ, ಫೋಟೋಗಳನ್ನು ಹೊಸ ಹಾರ್ಡ್ ಡ್ರೈವ್‌ಗೆ ಡೌನ್‌ಲೋಡ್ ಮಾಡಿಕೊಂಡೆ.

ಗ್ರೆಗ್ ಫೇರ್
ಸ್ಮಾರ್ಟ್‌ಫೋನ್

Google ಪ್ರಾಡಕ್ಟ್ ಮ್ಯಾನೇಜರ್ ಆಗಿರುವ ಗ್ರೆಗ್ ಫೇರ್ ಅವರು Google Takeout ನ ಜವಾಬ್ದಾರಿಯನ್ನು ಹೊಂದಿದ್ದಾರೆ; ಬಳಕೆದಾರರು Google ನಿಂದ ತಮ್ಮ ಡೇಟಾವನ್ನು ಡೌನ್‌ಲೋಡ್ ಮಾಡುವುದು ಮಾತ್ರವಲ್ಲದೆ ಅದನ್ನು ಇತರ ಪೂರೈಕೆದಾರರಿಗೆ ವರ್ಗಾಯಿಸಲು ಸಹ ಇದು ಅವಕಾಶ ನೀಡುತ್ತದೆ.

ಜನರು Takeout ಅನ್ನು ಹೇಗೆ ಬಳಸುತ್ತಾರೆ?

ಫೇರ್: ಹೆಚ್ಚಾಗಿ, ಅವರು Google Drive ನಲ್ಲಿ ಸಂಗ್ರಹಣೆ ಮಾಡುವ ಎಲ್ಲಾ ಡೇಟಾವನ್ನು ಬ್ಯಾಕಪ್ ಮಾಡಲು ಇದನ್ನು ಬಳಸುತ್ತಾರೆ.

ಮಿಕ್‌ಲಿಟ್ಜ್: ಇದು ಸ್ವಲ್ಪಮಟ್ಟಿಗೆ ತಾರ್ಕಿಕವಲ್ಲ, ಏಕೆಂದರೆ ವಾಸ್ತವವಾಗಿ, ನಮ್ಮ ಮನೆಯ ಸಂಗ್ರಹಣೆ ಸಾಧನಗಳಲ್ಲಿ ಇರುವುದಕ್ಕಿಂತ Google Drive ನಲ್ಲಿಯೇ ಡೇಟಾ ಬಹಳ ಹೆಚ್ಚು ಸುರಕ್ಷಿತವಾಗಿ ಇರುತ್ತದೆ.

ಫೇರ್: ಮನೆಯಲ್ಲಿ, ಬೆಕ್ಕು ಹಾರ್ಡ್ ಡ್ರೈವ್‌ನ ಮೇಲೆ ಉಚ್ಚೆ ಹೊಯ್ಯಬಹುದು, ಅಥವಾ ಮಕ್ಕಳು ಅದನ್ನು ಒಡೆದು ಹಾಕಬಹುದು ಅಥವಾ ಬೆಂಕಿ ಅವಘಡ ಸಂಭವಿಸಬಹುದು. Google ನಲ್ಲಿ, ಪ್ರತಿ ಫೈಲ್ ಅನ್ನು ವಿವಿಧ ಸರ್ವರ್‌ಗಳಲ್ಲಿ ಹಲವು ಬಾರಿ ಸಂಗ್ರಹಣೆ ಮಾಡಲಾಗುತ್ತದೆ. ಇದಕ್ಕಿಂತ ಹೆಚ್ಚಿನ ಸುರಕ್ಷತೆ ಸಿಗಲು ಸಾಧ್ಯವಿಲ್ಲ.

ಹಾಗಿದ್ದರೂ, ನೀವು ಸಹ ನಿಮ್ಮ ಡೇಟಾವನ್ನು ಈಗಲೂ ಹಾರ್ಡ್ ಡ್ರೈವ್‌ನಲ್ಲಿ ಬ್ಯಾಕಪ್ ಮಾಡಿಕೊಳ್ಳುತ್ತೀರಲ್ಲವೇ ಮಿಸ್ಟರ್ ಫೇರ್!

ಫೇರ್: ಅದು ಏಕೆಂದರೆ, ನನ್ನ ಪತ್ನಿ ಇಮೇಜ್ ಎಡಿಟಿಂಗ್ ಪ್ರೋಗ್ರಾಂಗಳನ್ನು ಬಳಸುತ್ತಾರೆ, ಆದ್ದರಿಂದ ಚಿತ್ರಗಳನ್ನು ಕ್ಲೌ‌ಡ್‌ನಲ್ಲಿ ಇರಿಸುವುದು ಪ್ರಾಯೋಗಿಕವಾಗಿರುವುದಿಲ್ಲ.

"Google ನಲ್ಲಿ, ಪ್ರತಿ ಫೈಲ್ ಅನ್ನು ವಿವಿಧ ಸರ್ವರ್‌ಗಳಲ್ಲಿ ಹಲವು ಬಾರಿ ಸಂಗ್ರಹಣೆ ಮಾಡಲಾಗುತ್ತದೆ. ಇದಕ್ಕಿಂತ ಹೆಚ್ಚಿನ ಸುರಕ್ಷತೆ ಸಿಗಲು ಸಾಧ್ಯವಿಲ್ಲ."

ಗ್ರೆಗ್ ಫೇರ್

ಹೌದೇ.

ಮಿಕ್‌ಲಿಟ್ಜ್: ಆದರೆ, ಉದಾಹರಣೆಗೆ, ನಾನು ಅಂತಹ ಯಾವುದೇ ಪ್ರೋಗ್ರಾಂಗಳನ್ನು ಬಳಸುವುದಿಲ್ಲ, ಆದರೂ ನನ್ನ ಎಲ್ಲಾ ಚಿತ್ರಗಳ ಬ್ಯಾಕಪ್ ಪ್ರತಿಗಳನ್ನು ಹಾರ್ಡ್-ಡ್ರೈವ್‌ನಲ್ಲಿ ಉಳಿಸುತ್ತೇನೆ. ಅದು ನನ್ನ ಡೇಟಾ, ಆದ್ದರಿಂದ ನನಗೆ ಭೌತಿಕ ನಕಲು ಬೇಕಿದೆ.

ನೀವು ಏಕೆ “ತಾರ್ಕಿಕವಲ್ಲದ” ಈ ವರ್ತನೆಯನ್ನು ಮಾಡುತ್ತೀರಿ?

ಮಿಕ್‌ಲಿಟ್ಜ್: ಫೋಟೋಗಳೊಂದಿಗೆ ನಮಗೆ ಬಹಳ ವೈಯಕ್ತಿಕವಾದ ಮತ್ತು ಭಾವನಾತ್ಮಕವಾದ ಸಂಬಂಧ ಇರುತ್ತದೆ. ಅವು ಎಷ್ಟೊಂದು ನೆನಪುಗಳಿಗೆ ಸಂಬಂಧಪಟ್ಟಿರುತ್ತವೆ. ಒಬ್ಬ ಬಳಕೆದಾರನಾಗಿ, ನನ್ನ ಫೋಟೋವನ್ನು ಸುರಕ್ಷಿತವಾಗಿರಿಸಲು ನಾನು ಒಂದೇ ಕಂಪನಿಯ ಮೇಲೆ ಅವಲಂಬಿಸುವ ಸ್ಥಿತಿಯಲ್ಲಿರುವುದು ನನಗೆ ಇಷ್ಟವಿಲ್ಲ – ಅದು ನಾನು ಕೆಲಸ ಮಾಡುವ ಕಂಪನಿಯಾಗಿದ್ದರೂ ಸಹ. ಆದ್ದರಿಂದಲೇ Google Takeout ನಂತಹ ಪೋರ್ಟೆಬಿಲಿಟಿ ಸೇವೆಗಳು ತುಂಬಾ ಮುಖ್ಯವಾಗುತ್ತವೆ ಏಕೆಂದರೆ, ಬಳಕೆದಾರರ ಡೇಟಾ ಕ್ಲೌಡ್‌ನಲ್ಲಿ ಇದ್ದರೂ ಸಹ ಅವರು ಯಾವಾಗ ಬೇಕಾದರೂ ಅದನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

Google ನಲ್ಲಿ, ಪೋರ್ಟೆಬಿಲಿಟಿಯು ಯಾವಾಗಿನಿಂದ ಒಂದು ಮುಖ್ಯ ವಿಷಯವಾಗಿದೆ?

ಫೇರ್: ಒಂದು ದಶಕಕ್ಕೂ ಹೆಚ್ಚಿನ ಸಮಯದಿಂದ. ನಾವು ಪ್ರತ್ಯೇಕ ಡೇಟಾ ಪೋರ್ಟೆಬಿಲಿಟಿ ಸೇವೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರಾರಂಭ ಮಾಡಿದೆವು. ನಂತರ 2011 ರಲ್ಲಿ, Google ತನ್ನ ಕೇಂದ್ರೀಕೃತ ಪರಿಹಾರೋಪಾಯವನ್ನು ಪ್ರಾರಂಭಿಸಿತು: Takeout. ಆವಾಗಿನಿಂದ ನಾವು ಇನ್ನಷ್ಟು Google ಸೇವೆಗಳನ್ನು ಇದರೊಂದಿಗೆ ಏಕೀಕೃತಗೊಳಿಸಿದ್ದೇವೆ ಮತ್ತು ಇಂದು, Takeout ಇವುಗಳಲ್ಲಿ 40 ಕ್ಕೂ ಹೆಚ್ಚು ಸೇವೆಗಳನ್ನು ಬೆಂಬಲಿಸುತ್ತದೆ.

ಹಲವಾರು ಬಳಕೆದಾರರು ತಮ್ಮ ಡೇಟಾವನ್ನು ತಮ್ಮ ಕಂಪ್ಯೂಟರ್‌ಗಳಿಗೆ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ, ಆದರೆ ಅದನ್ನು ಇತರ ಸೇವೆಗಳಿಗೆ ವರ್ಗಾಯಿಸುವುದು ಬಹಳ ಕಡಿಮೆ. ಈ ಅಸಮತೋಲನ ಏಕೆ ಇದೆ?

ಫೇರ್: ಇಂದು ಬಳಕೆದಾರರು ಡೇಟಾವನ್ನು Google ನಿಂದ Dropbox, Box, ಅಥವಾ Microsoft Office 365 ಗೆ – ಮತ್ತು ಹಿಂದಕ್ಕೂ ಸಹ ವರ್ಗಾಯಿಸಿಕೊಳ್ಳಬಹುದು. ನಮ್ಮ ಬಹುತೇಕ ಪ್ರತಿಸ್ಪರ್ಧಿಗಳು ಇನ್ನೂ ಈ ಅವಕಾಶವನ್ನು ಒದಗಿಸುತ್ತಿಲ್ಲ. ಇದನ್ನು ಬದಲಾಯಿಸುವುದಕ್ಕಾಗಿ ನಾವು ಡೇಟಾ ವರ್ಗಾವಣೆ ಪ್ರಾಜೆಕ್ಟ್ ಅನ್ನು 2017 ರಲ್ಲಿ ಪ್ರಾರಂಭಿಸಿದೆವು ಮತ್ತು ಪ್ರಾಜೆಕ್ಟ್ ಅನ್ನು ಜುಲೈ 2018 ರಲ್ಲಿ ಅಧಿಕೃತವಾಗಿ ಘೋಷಿಸಿದೆವು. ಇದು ಓಪನ್ ಸೋರ್ಸ್ ಪ್ರಾಜೆಕ್ಟ್ ಆಗಿದೆ ಮತ್ತು ಪೋರ್ಟೆಬಿಲಿಟಿ ಕಾರ್ಯಾಚರಣೆಗಳಿಗಾಗಿ ಕಂಪನಿಗಳಿಗೆ ಉಚಿತ ಕೋಡ್ ಒದಗಿಸುತ್ತದೆ ಮತ್ತು ಒಂದು ಸೇವೆಯಿಂದ ಮತ್ತೊಂದಕ್ಕೆ ಅಡಚಣೆಯಿಲ್ಲದೆ ಡೇಟಾ ವರ್ಗಾಯಿಸುವುದನ್ನು ಸಕ್ರಿಯಗೊಳಿಸುತ್ತದೆ.

ಮಿಕ್‌ಲಿಟ್ಜ್: ಒಂದು ಸ್ಟಾರ್ಟ್-ಅಪ್ ಉದ್ದಿಮೆಯು ಉತ್ತಮವಾದ ಒಂದು ಹೊಸ ಸೇವೆಯನ್ನು ಅಭಿವೃದ್ಧಿಪಡಿಸಿದೆ ಎಂದು ಭಾವಿಸಿಕೊಳ್ಳಿ. ತನ್ನದೇ ಆದ ಪೋರ್ಟೆಬಿಲಿಟಿ ಪರಿಹಾರವನ್ನು ರಚಿಸುವುದು ಈ ಸಣ್ಣ ಕಂಪನಿಗೆ ತೀರಾ ದುಬಾರಿಯಾಗಿರುತ್ತದೆ. ಇದರ ಬದಲಿಗೆ, ಅದು ಡೇಟಾ ವರ್ಗಾವಣೆ ಪ್ರಾಜೆಕ್ಟ್‌ಗೆ ಹೋಗಿ, ಸಂಬಂಧಿತ ಕೋಡ್‌ಗಳನ್ನು ತನ್ನದೇ ಸಾಫ್ಟ್‌ವೇರ್‌ಗೆ ವರ್ಗಾಯಿಸಿಕೊಳ್ಳಬಹುದು.

ಡೈರೆಕ್ಟರ್ ಆಫ್ ಇಂಜಿನಿಯರಿಂಗ್ ಆಗಿರುವ ಸ್ಟೀಫನ್ ಮಿಕ್‌ಲಿಟ್ಜ್ (ಬಲಕ್ಕೆ) ಅವರು Google ನಲ್ಲಿ ಜಾಗತಿಕ ಗೌಪ್ಯತೆ ಹಾಗೂ ಸುರಕ್ಷತೆಯ ಜವಾಬ್ದಾರಿ ಹೊಂದಿದ್ದಾರೆ. ಅವರು ಟೆಕ್ನಿಕಲ್ ಯುನಿವರ್ಸಿಟಿ ಆಫ್ ಮ್ಯೂನಿಕ್‌ನಲ್ಲಿ ಕಂಪ್ಯೂಟರ್ ಸಯನ್ಸ್ ಅಧ್ಯಯನ ಮಾಡಿದ್ದಾರೆ ಮತ್ತು 2007 ನೇ ಇಸವಿಯ ಕೊನೆಯ ಭಾಗದಿಂದ Google ನ ಮ್ಯೂನಿಕ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಆದರೆ, ನಾನು ಪೂರೈಕೆದಾರರನ್ನು ಬದಲಾಯಿಸಿದರೆ ನಿಮಗೇನು ಲಾಭವಿದೆ?

ಫೇರ್: Google ಸೇವೆಗಳು ಅತ್ಯುತ್ತಮವಾಗಿರುವುದರಿಂದ ನೀವು ಇವುಗಳನ್ನು ಬಳಸಬೇಕೆಂದು ನಾವು ಬಯಸುತ್ತೇವೆಯೇ ಹೊರತು, ನಿಮ್ಮ ಡೇಟಾವನ್ನು ಬೇರೆಲ್ಲೂ ಬಳಸಲು ಸಾಧ್ಯವಿಲ್ಲ ಎಂದು ನೀವು ಭಾವಿಸಿರುವ ಕಾರಣಕ್ಕಲ್ಲ.

ಮೇ 2018 ರಲ್ಲಿ ಜಾರಿಗೆ ಬಂದ ಸಾಮಾನ್ಯ ಡೇಟಾ ಸಂರಕ್ಷಣಾ ನಿಯಮವು ಡೇಟಾ ಪೋರ್ಟೆಬಿಲಿಟಿಯ ಕುರಿತು ನಿಬಂಧನೆಗಳನ್ನು ಹೊಂದಿದೆ. ಈ ಸ್ಪೆಸಿಫಿಕೇಶನ್‌ಗಳನ್ನು ಪೂರೈಸಲು ನಿಮ್ಮ ಡೇಟಾ ಡೌನ್‌ಲೋಡ್ ಪರಿಕರವನ್ನು ನೀವು ಕಸ್ಟಮೈಸ್ ಮಾಡಬೇಕಾಯಿತೇ?

ಫೇರ್: ನಾವು 2016 ರಲ್ಲಿ ಮೊದಲ ಬಾರಿಗೆ ಈ ಕಾಯ್ದೆಯನ್ನು ಓದಿದಾಗ, ಪೋರ್ಟೆಬಿಲಿಟಿಯ ವಿಷಯದಲ್ಲಿ ನಾವು ಈಗಾಗಲೇ ಉತ್ತಮ ಕಾರ್ಯನಿರ್ವಹಿಸುತ್ತಿದ್ದೇವೆ ಎಂಬುದನ್ನು ಕಂಡುಕೊಂಡೆವು. ಆವಾಗಲೂ ಸಹ, ನಾವು ಈ ವಿಷಯದ ಕುರಿತು ಒಂದಿಷ್ಟು ಸಮಯದಿಂದ ಗಂಭೀರವಾಗಿ ಕೆಲಸ ಮಾಡುತ್ತಿದ್ದೆವು.

ಮಿಕ್‌ಲಿಟ್ಜ್: ಈ ವಿಷಯಕ್ಕೆ ದೊರೆಯಬೇಕಾದ ಗಮನವು ಇದೀಗ ಸಿಗುತ್ತಿರುವುದು ಒಳ್ಳೆಯದು ಎಂದು ನಾವು ಭಾವಿಸುತ್ತೇವೆ. ಸದ್ಯಕ್ಕೆ, ಪೋರ್ಟೆಬಿಲಿಟಿ ಎಂಬುದು ಹೆಚ್ಚು ಬಳಕೆದಾರರಿಗೆ ಆಸಕ್ತಿಯಿಲ್ಲದ ಒಂದು ಸಣ್ಣ ಕ್ಷೇತ್ರವಾಗಿದೆ. ಆದರೆ, ಕೆಲವೇ ವರ್ಷಗಳಲ್ಲಿ ಇದು ಬದಲಾಗುತ್ತದೆ ಎಂದು ನಾವು ಭಾವಿಸುತ್ತೇವೆ.

"ನನ್ನ ಬಳಿ ಇರುವ ಹಾಗೆಯೇ, ನನ್ನ ಮಕ್ಕಳು ಸಹ ಅವರ ಬಾಲ್ಯದ ಫೋಟೊಗಳನ್ನು ಹೊಂದಿರಬೇಕು."

ಸ್ಟೀಫನ್ ಮಿಕ್‌ಲಿಟ್ಜ್

ಏಕೆ?

ಮಿಕ್‌ಲಿಟ್ಜ್: ಜನರು ಈಗಷ್ಟೇ ಕ್ಲೌಡ್‌ನಲ್ಲಿ ತಮ್ಮ ಡೇಟಾವನ್ನು ಸಂಗ್ರಹಣೆ ಮಾಡಲು ಪ್ರಾರಂಭಿಸಿದ್ದಾರೆ. ಆದರೆ, ಒಂದು ಕಂಪನಿ ದಿವಾಳಿಯಾಗಿಬಿಟ್ಟಿದೆ ಮತ್ತು ಆ ಕಂಪನಿಯ ಸರ್ವರ್‌ಗಳಲ್ಲಿ ನಿಮ್ಮ ಡೇಟಾವನ್ನು ಸಂಗ್ರಹಣೆ ಮಾಡಲಾಗಿದೆ ಎಂದು ಭಾವಿಸೋಣ. ಈ ಡೇಟಾವನ್ನು ಪಡೆದುಕೊಳ್ಳಲು ನಿಮಗೆ ಸಾಧ್ಯವಾಗಬೇಕು ಎಂದು ನೀವು ಬಯಸುವಿರಿ. ಇದು ಡೇಟಾ ಬಾಳಿಕೆಯ ವಿಷಯಕ್ಕೂ ಸಂಬಂಧಿಸಿದೆ. ನನ್ನ ತಂದೆ-ತಾಯಿಯ ಹಳೆಯ ಫೋಟೋಗಳನ್ನು ನೋಡಲು ನನಗೆ ಸಾಧ್ಯವಾಗುವ ಹಾಗೆಯೇ ನನ್ನ ಮಕ್ಕಳಿಗೂ ತಮ್ಮ ಬಾಲ್ಯದ ಫೋಟೋಗಳನ್ನು ನೋಡಲು ಸಾಧ್ಯವಾಗಬೇಕು.

ನಿಮ್ಮ ಡಿಜಿಟಲ್ ಫೋಟೋಗಳು ಕೂಡಾ ಅನಲಾಗ್ ಫೋಟೋಗಳಷ್ಟೇ ಬಾಳಿಕೆ ಬರಬೇಕು ಎಂದು ನೀವು ಬಯಸುತ್ತೀರಾ?

ಮಿಕ್‌ಲಿಟ್ಜ್: ಹೌದು. ಒಂದು ವಿಶಾಲ ಅರ್ಥದಲ್ಲಿ, ಇದು ಡೇಟಾ ರಕ್ಷಣೆಯ ಒಂದು ಆಯಾಮವಾಗಿದೆ - ಅಂದರೆ ನಾನು ಇಂದು ಸಂಗ್ರಹಣೆ ಮಾಡಿದ ಡೇಟಾವನ್ನು 50 ವರ್ಷಗಳ ನಂತರವೂ ಬಳಸಲು ನನಗೆ ಸಾಧ್ಯವಾಗುತ್ತದೆ.

ಫೋಟೋಗಳು: ಕಾನ್ನಿ ಮಿರ್‌ಬಾಕ್

ಸೈಬರ್‌ಸೆಕ್ಯೂರಿಟಿ ಸುಧಾರಣೆಗಳು

ಜಗತ್ತಿನಲ್ಲಿರುವ ಇತರರಿಗಿಂತ ನಾವು ಹೆಚ್ಚು ಜನರನ್ನು ಆನ್‌ಲೈನ್‌ನಲ್ಲಿ ಹೇಗೆ ಸುರಕ್ಷಿತವಾಗಿರಿಸುತ್ತೇವೆ ಎಂದು ತಿಳಿಯಿರಿ.

ಇನ್ನಷ್ಟು ತಿಳಿಯಿರಿ